ತಡೆಗೋಡೆ ದುರಸ್ತಿ ಪ್ರಾರಂಭ - ರೈಲ್ವೆ ನಿಲ್ದಾಣ ರಸ್ತೆಯ ಅಪಾಯ ದೂರವಾಗುವ ಸಾಧ್ಯತೆ

PTR_2 JUL_5
Published on


ಪುತ್ತೂರು: ಉಪ್ಪಿನಂಗಡಿ ರಸ್ತೆಯನ್ನು ಸಮೀಪದಿಂದ ಸಂಪರ್ಕಿಸುವ ನೆಲ್ಲಿಕಟ್ಟೆ-ಕಬಕ ಪುತ್ತೂರು ರೈಲ್ವೆ ನಿಲ್ದಾಣ-ಹಾರಾಡಿ ರಸ್ತೆಯ ಅಪೂರ್ಣ ಕಾಮಗಾರಿಗೆ ಕಾರಣವಾದ ಸೇತುವೆಯ ಸಮೀಪ ಕುಸಿತಗೊಂಡ ತಡೆಗೋಡೆಯ ದುರಸ್ತಿಗೆ ರೈಲ್ವೆ ಇಲಾಖೆ ಮುಂದಾಗಿದೆ.


ಸುಮಾರು ೫೦ ವರ್ಷ ಹಳೆಯದಾದ ಸೇತುವೆಯ ಸಮೀಪ ಮಳೆಗೆ ತಡೆಗೋಡೆ ವರ್ಷಗಳ ಹಿಂದೆ ಕುಸಿದು ಹೋಗಿತ್ತು. ಆ ಬಳಿಕ ನಗರಸಭೆ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಿದ್ದು, ಕುಸಿತವಾದ ಜಾಗವನ್ನು ಹಾಗೇ ಬಿಟ್ಟು ಅಪಾಯ ಆಹ್ವಾನಿಸುವಂತಿತ್ತು. ಮಳೆಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವ ಸಮಯದಲ್ಲೂ ಇದಕ್ಕೆ ಪರಿಹಾರ ಕಾಣದೆ ಜಿಲ್ಲಾಽಕಾರಿಗಳ ಗಮನಕ್ಕೆ ತರಲಾಗಿತ್ತು.

ರಸ್ತೆ ಕಾಮಗಾರಿ ಸಂದರ್ಭದಲ್ಲಿ ಸೇತುವೆ ಆಸುಪಾಸಿನ ಕಾಮಗಾರಿಯನ್ನು ರೈ ಇಲಾಖೆ ಮಾಡಲಿದೆ ಎಂದು ಹೇಳಿಕೊಳ್ಳಲಾಗಿತ್ತಾದರೂ, ವರ್ಷವಾದರೂ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ನೆಹರು ನಗರದ ಸೇತುವೆ ಕಾಮಗಾರಿಯ ಬಳಿಕ ರೈಲ್ವೆ ನಿಲ್ದಾಣದ ಬಳಿಯ ತಡೆಗೋಡೆ ಕಾಮಗಾರಿಯನ್ನು ನಡೆಸಲಿದ್ದಾರೆಂದು ಪೌರಾಯುಕ್ತ ಮಧು ಎಸ್. ಮನೋಹರ್ ಸಾರ್ವಜನಿಕರಿಗೆ ತಿಳಿಸಿದ್ದರು. ಈಗ ನೆಹರು ನಗರದಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ತಡೆಗೋಡೆಯ ಕೆಲಸ ಕೈಗೆತ್ತಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿದೆ.

ಕಳೆದ ಮೇನಲ್ಲಿ ವಿಜಯವಾಣಿ ಅಪಾಯಕಾರಿ ಸ್ಥಳ ಎಂದು ವರದಿ ಮಾಡಿದ್ದು, ಮಾರನೇ ದಿನ ರಸ್ತೆಯಲ್ಲಿ ತಡೆಗೋಡೆಯನ್ನು ಕಟ್ಟುವ ಮೂಲಕ ವಾಹನ ಸವಾರರಿಗೆ ಯಾವುದೇ ಅಪಾಯ ಸಂಭವಿಸದಂತೆ ನೋಡಿಕೊಂಡಿದ್ದರು. ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ತಡೆಗೋಡೆ ನಿರ್ಮಾಣ ಮಾಡಬೇಕೆಂದು ರೈಲ್ವೆ ಇಲಾಖೆಯ ಹಿರಿಯ ವಿಭಾಗೀಯ ಅಭಿಯಂತ ಮತ್ತು ನಗರಸಭೆಯ ಪೌರಾಯುಕ್ತರಿಗೆ ನೋಟಿಸ್ ಜಾರಿ ಮಾಡಿದ್ದರು.

ಮಂಗಳವಾರ ಬೆಳಗ್ಗೆ ರೈಲ್ವೆ ಕಾರ್ಮಿಕರು ಯಂತ್ರ ಸಹಿತವಾಗಿ ಸ್ಥಳಕ್ಕೆ ಆಗಮಿಸಿ ಸೇತುವೆಯ ಸಮೀಪ ತುಂಬಿಕೊಂಡಿದ್ದ ಗಿಡಗಳನ್ನು ತೆರವು ಮಾಡಿ ಸ್ಥಳದಲ್ಲಿ ಆಗಿರುವ ಸಮಸ್ಯೆಯೇನೆಂಬುದನ್ನು ಪರಿಶೀಲನೆ ನಡೆಸಿದ್ದಾರೆ. ಸ್ವಚ್ಛವಾಗುತ್ತಿದ್ದಂತೆ ಸೇತುವೆ ಸಮೀಪ ನಿರ್ಮಾಣದ ಮಾಡಿದ ತಡೆಗೋಡೆ ಕುಸಿತವಾಗಿ ರಸ್ತೆ ಕಾಮಗಾರಿಗೆ ಅಡಚಣೆ ಆಗಿರುವುದು ಬಹಿರಂಗಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net