ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುವ ಮೂಲಕ ಗರಿಷ್ಠ ಜನರನ್ನು ತಲುಪಬಹುದಾದ ಪುತ್ತೂರು- ಕಾಂಞಂಗಾಡು ರೈಲು ಮಾರ್ಗ ರಚನೆಯ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಸರ್ಕಾರಕ್ಕೆ ಹಿಂದೆ ಸಲ್ಲಿಸಿದ ನಾಲ್ಕು ವಿವಿಧ ಪ್ರಸ್ತಾವನೆ ಈಗ ಮರು ಜೀವ ಪಡೆದುಕೊಂಡಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಬೆಳೆಯುತ್ತಿರುವ ನಗರಗಳನ್ನು ಸಂಪರ್ಕಿಸುವ ಕಾರಣದಿಂದ ಪುತ್ತೂರು ಶಾಸಕರು ಈ ಬಗ್ಗೆ ಆಸಕ್ತಿ ತೋರಿಸಬೇಕೆಂದು ಪುತ್ತೂರು ಸಿಟಿಜನ್ಸ್ ಫೋರಂ ಮನವಿ ಸಲ್ಲಿಸಿದೆ.
ಕಾಣಿಯೂರು- ಕಾಞಂಗಾಡು ನಡುವಣ ೯೧ ಕಿ.ಮೀ. ಉದ್ದ ಹೊಸ ರೈಲು ಮಾರ್ಗ ನಿರ್ಮಾಣ ವಿಚಾರ ಮರುಜೀವ ಪಡೆಯುತ್ತಿದ್ದಂತೆ ೧೦೦ ಕಿ.ಮೀ. ಉದ್ದ ಪುತ್ತೂರು- ಕಾಂಞಂಗಾಡು ರೈಲು ಮಾರ್ಗ ನಿರ್ಮಾಣದ ಪ್ರಸ್ತಾಪಕ್ಕೆ ಬೇಡಿಕೆ ಎದ್ದಿದೆ. ಕಾಣಿಯೂರು ಸಂಪರ್ಕಿಸುವುದರಿಂದ ಪುತ್ತೂರು ರೈಲ್ವೆ ಕೇಂದ್ರವಾಗಿ ಬೆಳೆಯುವುದಕ್ಕೆ ಸಮಸ್ಯೆಯಾಗುತ್ತದೆ. ಪುತ್ತೂರು ಸಂಪರ್ಕಿಸುವ ರೈಲು ಮಾರ್ಗದಿಂದ ಈಗಿರುವ ರೈಲ್ವೆ ಮಾರ್ಗಕ್ಕೆ ಪರ್ಯಾಯ ಮಾರ್ಗವಾಗಿ ಅಭಿವೃದ್ಧಿಯಾಗಲು ಸಾಕಷ್ಟು ಅವಕಾಶಗಳಿವೆ ಎಂದು ಉಲ್ಲೇಖಿಸಲಾಗಿದೆ.
ಮೊದಲ ಪ್ರಸ್ತಾವನೆಯಲ್ಲಿ ಚುಳ್ಳಿಕೆರೆ, ಕೊಟ್ಟಿಕೋಲ್, ಬನ್ನಾರಕ್ಯಾ, ಬಳಕ್ಕ ಅಡ್ಕತೊಡಿ, ಮುಳ್ಳೇರಿಯ, ನಾಟಿಕಲ್, ಯೇತಡ್ಕ, ಪೆರ್ಲ, ಅಡ್ಯನಡ್ಕ, ವಿಟ್ಲ, ಕಬಕದಲ್ಲಿ ಈಗಿರುವ ಹಳಿಗೆ ಸೇರ್ಪಡೆಯಾಗಲಿದ್ದು, ಮಾರ್ಗ ೧೦೩ ಕಿ.ಮೀ. ದೂರವನ್ನು ಒಳಗೊಂಡಿದ್ದರೂ ಗರಿಷ್ಠ ಜನಸಂಖ್ಯೆ, ನಗರ ಒಟ್ಟುಗೂಡಿಸುವಿಕೆಗಳ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸೇವೆ ಸಲ್ಲಿಸುವ ಜತೆಗೆ ಪರಿಸರದ ಮೇಲೆ ಪರಿಣಾಮ ಕನಿಷ್ಠವಾಗಿರುತ್ತದೆ. ಎರಡನೇ ಪ್ರಸ್ತಾವನೆಯಲ್ಲಿ ಮುಳ್ಳೇರಿಯದಿಂದ ಸುಳ್ಯಪದವು, ಮೈಂದನಡ್ಕ ಮೂಲಕ ಪುತ್ತೂರು ಸಂಪರ್ಕಿಸುವ ೮೫ ಕಿ.ಮೀ. ಒಳಗೊಂಡಿದೆ.
ಮೂರನೇ ಪ್ರಸ್ತಾವನೆಯಲ್ಲಿ ಬೇಕಲ, ಉಡುಮ, ಪೊನ್ನಾಚಿ, ಬೆವಿಂಜೆ, ಮುಳಿಯಾರ್, ನರಳ, ಮುಳ್ಳೇರಿಯಾ, ಸುಳ್ಯಪದವು, ಮೈಂದನಡ್ಕ, ಉಪ್ಪಳಿಕೆಯಾಗಿ ಪುತ್ತೂರು ಸಂಪರ್ಕಿಸುವ ಮಾರ್ಗ ೭೧ ಕಿ.ಮೀ. ಇರಲಿದೆ. ಮಾರ್ಗ ೧೬ ಕಿ.ಮೀ. ಅಸ್ತಿತ್ವದಲ್ಲಿದ್ದು, ಕೈಗಾರಿಕಾ ಪ್ರದೇಶ, ಪ್ರವಾಸಿ ತಾಣ, ಗಿರಿಧಾಮಗಳು, ದಟ್ಟವಾದ ಸಸ್ಯವರ್ಗ, ಪ್ರಮುಖ ಜೀವವೈವಿಧ್ಯ ಪ್ರದೇಶಗಳನ್ನು ಒಳಗೊಂಡಿದೆ. ನಾಲ್ಕನೇ ಪ್ರಸ್ತಾವನೆಯಲ್ಲಿ ಸುಳ್ಯದಿಂದ ಕಾಣಿಯೂರು ಸಂಪರ್ಕಿಸುವ ಬದಲಾಗಿ ಮಡಿಕೇರಿಯನ್ನು ಸಂಪರ್ಕಿಸುವ ಹಾದಿಯನ್ನು ಸೂಚಿಸಲಾಗಿದೆ.
ಸೂಕ್ಷ್ಮ ಪ್ರದೇಶಕ್ಕೆ ಹಾನಿ!
ಕಾಣಿಯೂರು- ಕಾಂಞಂಗಾಡು ರೈಲು ಮಾರ್ಗ ೯೧ ಕಿ.ಮೀ. ಉದ್ದವಾಗಿದ್ದರೂ ಹಲವು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಹಾನಿಯಾಗಲಿದೆ ಎಂಬ ಆರೋಪವಿದೆ. ಕಾಂಞಂಗಾಡುವಿನಿಂದ ಮೀತ್, ಕೊಟ್ಟೋಡಿ, ಬಳಾಂತೋಡು, ಪಾಣತ್ತೂರು, ಕಲ್ಲಪಳ್ಳಿ, ಆಲೆಟ್ಟಿ, ಸುಳ್ಯ, ಬೆಳ್ಳಾರೆ ಮೂಲಕ ಕಾಣಿಯೂರಿನಲ್ಲಿ ಮಂಗಳೂರು- ಬೆಂಗಳೂರು ಹಳಿಯನ್ನು ರಚಿಸಿ ರೈಲ್ವೆ ಸಂಪರ್ಕ ಸಾಽಸಲು ಯೋಜನೆ ರೂಪಿಸಲಾಗಿದೆ. ಸರ್ಕಾರ ಮಾರ್ಗದ ರೂಪುರೇಷೆಯನ್ನು ಹಲವು ವರ್ಷದ ಹಿಂದೆ ಸಿದ್ಧಪಡಿಸಿತ್ತಾದರೂ ಕಾರ್ಯರೂಪಕ್ಕೆ ತರುವುದಕ್ಕೆ ಹಿಂದೇಟು ಹಾಕಿತ್ತು.
ಅನುಕೂಲಕರ ಮಾರ್ಗ!
ಪೆರ್ಲ ಅಡ್ಕನಡ್ಕ ವಿಟ್ಲ ಮೂಲಕ ಸಾಗುವ ರೈಲು ಮಾರ್ಗದಲ್ಲಿ ಕನಿಷ್ಠ ಭೂಪ್ರದೇಶಕ್ಕೆ ಹಾನಿಯಾಗಲಿದ್ದು, ಸೇತುವೆಗಳ ಸಂಖ್ಯೆಯೂ ಕಡಿಮೆಯಿದೆ. ಹೆಚ್ಚಿನ ಕಡೆಯಲ್ಲಿ ಸಮತಟ್ಟು ಪ್ರದೇಶಗಳೇ ಇದ್ದು, ಜನರ ಓಡಾಟಕ್ಕೂ ಹೆಚ್ಚು ಅನುಕೂಲಕರವಾಗಿ ಪರಿಣಮಿಸಲಿದೆ. ಸೂಕ್ಷ್ಮ ಅರಣ್ಯ ಪ್ರದೇಶವೂ ಈ ಪ್ರದೇಶದಲ್ಲಿ ಇಲ್ಲದ ಕಾರಣ ಪ್ರಾಣಿ ಪಕ್ಷಿಗಳಿಗೂ ಸಮಸ್ಯೆಯಾಗುವುದು ಕಡಿಮೆಯಾಗಲಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ರೈಲು ಮಾರ್ಗಗಳನ್ನು ನಿರ್ಮಿಸಲು ವಿಶಾಲವಾದ ಅರಣ್ಯದ ನಷ್ಟವಾಗಬಹುದು ಮತ್ತು ಕಾಡುಪ್ರಭೇದಗಳ ವಲಸೆಗೆ ಕಾರಣವಾಗಬಹುದು ಮತ್ತು ಪರಿಸರ ವ್ಯವಸ್ಥೆಯನ್ನು ಅಸಮತೋಲನಗೊಳಿಸುವ ಪ್ರಕ್ರಿಯೆ ಆಗಬಹುದು ಎಂಬ ಕಾರಣಕ್ಕೆ ಪ್ರಸ್ತಾವನೆ ೨, ೩ ಹಾಗೂ ೪ ಸವಾಲಾಗಿ ಪರಿಣಮಿಸಲಿದೆ. ಹಲವಾರು ಹೊಳೆಗಳು, ಕಡಿದಾದ ಇಳಿಜಾರು ಬೆಟ್ಟಗಳು ಮತ್ತು ದಟ್ಟ ಕಾಡುಗಳಿವೆ. ಈ ಕಾರಣದಿಂದ ಪ್ರಸ್ತಾವನೆ-೧ ಸೂಕ್ತವಾಗಿದೆ ಎನ್ನುವುದನ್ನು ಮನವಿ ಮೂಲಕ ಮನವರಿಕೆ ಮಾಡಿದ್ದೇವೆ.
| ರಾಮ್‌ಮೋಹನ್ ರಾವ್, ಪುತ್ತೂರು ಸಿಟಿಜನ್ಸ್ ಫೋರಂ
ಅಧ್ಯಯನದ ಪ್ರಕಾರ ಪ್ರಸ್ತಾವಿತ ರೈಲು ಮಾರ್ಗ ಪ್ರದೇಶವು ಸೌಮ್ಯವಾದ ಇಳಿಜಾರಿನ ಬೆಟ್ಟಗಳನ್ನು ಹೊಂದಿದ್ದು, ಎರಡೂ ಬದಿಗಳಲ್ಲಿ ದಟ್ಟವಾದ ಸಸ್ಯವರ್ಗವನ್ನು ಹೊಂದಿದೆ. ಈ ಪ್ರದೇಶದಲ್ಲಿ ಚಂದ್ರಗಿರಿ ನದಿ ಬರಿದಾಗುತ್ತಿದೆ. ನದಿಯ ದಡದಲ್ಲಿ ಎತ್ತರವು ತುಲನಾತ್ಮಕವಾಗಿ ಕಡಿಮೆಯಾಗಿದೆ ಮತ್ತು ಕೆಲವು ಸ್ಥಳಗಳಲ್ಲಿ ಇದು ಲ್ಯಾಟರೈಟ್ ಮಣ್ಣು ಮತ್ತು ಬಂಡೆಗಳನ್ನು ಒಳಗೊಂಡಿರುವುದರಿಂದ ಈ ಪ್ರದೇಶವನ್ನು(ಆಗ್ನೇಯ ಜಿಲ್ಲೆಗಳ ಕಡೆಗೆ) ರೈಲು ಮಾರ್ಗಕ್ಕಾಗಿ ಆಯ್ಕೆ ಮಾಡಬಹುದು.
| ಪಿ.ಕೆ.ಸತೀಶನ್ ವಕೀಲ