ಆಸ್ತಿ ವಿಚಾರಕ್ಕೆ ಯುವಕ ಆತ್ಮಹತ್ಯೆ

case
Published on

ರಾಯಚೂರು: ಜಮೀನು ಆಸ್ತಿ ವಿಚಾರಕ್ಕೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

ಹುಲಿಗೆಪ್ಪ (22) ಮೃತ ಯುವಕ. ಮಂಗಳವಾರ ರಾತ್ರಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹುಲಿಗೆಪ್ಪ ಹಾಗೂ ಆತನ ಅತ್ತೆ ಲಕ್ಷ್ಮೀದೇವಿ ಮಧ್ಯೆ ಮಾತಿನ ಚಕಾಮಕಿ ನಡೆದಿದೆ. ನಂತರ ಮನೆಯಲ್ಲಿ ಯಾರು ಇಲ್ಲದ ವೇಳೆ ಹುಲಿಗೆಪ್ಪ ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಡೆತ್‌ನೋಟ್‌ನಲ್ಲಿ ಅತ್ತೆ ಲಕ್ಷ್ಮಿ, ಅತ್ತೆಯ ಮಕ್ಕಳಾದ ಅನುರಾಧ, ಮಹಾದೇವಿ, ಅನಿಲ್ ಎಂಬುವವರ ಹೆಸರು ಪ್ರಸ್ತಾಪ ಮಾಡಿದ್ದಾನೆ. ‘ನನ್ನ ಸಾವಿಗೆ ನನ್ನ ಅತ್ತೆ ಲಕ್ಷ್ಮೀದೇವಿ ಮತ್ತು ಆಕೆಯ ಮಕ್ಕಳೇ ಕಾರಣ. ನಮ್ಮ ಕುಟುಂಬಕ್ಕೆ ಸೇರಬೇಕಾದ 17 ಗುಂಟೆ ಜಾಗ ತಮ್ಮದು ಎಂದು ಬೆದರಿಕೆ ಹಾಕಿದ್ದಾರೆ. ನನ್ನ ಸಾವಿನ ಬಳಿಕವಾದರೂ ನಮ್ಮ ಜಾಗ ನಮಗೆ ಕೊಡಿ’ ಎಂದು ಬರೆದಿದ್ದಾನೆ.

ಈ ಕುರಿತು ಹುಲಿಗೆಪ್ಪ ಸಂಬಂಧಿಕರು ಸಿರವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net