

ರಾಯಚೂರು: ನರ್ಸರಿಗಳಿಂದ ನೀಡಲಾಗಿರುವ ಮೆಣಸಿನಕಾಯಿ ಬೀಜಗಳು ವಿಫಲವಾಗಿ ಆರ್ಥಿಕ ನಷ್ಟಕ್ಕೆ ಗುರಿಯಾಗಿರುವ ರೈತರಿಗೆ ನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬುಧವಾರ ಪ್ರತಿಭಟನೆ ನಡೆಸಿದವು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ರೈತರಿಗೆ ಕಳಪೆ ಬೀಜ ನೀಡಿದವರ ಹಾಗೂ ಸೂಕ್ತ ಕ್ರಮಕೈಗೊಳ್ಳದ ತೋಟಗಾರಿಕೆ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಸರ್ಕಾರದಿಂದ ಸಬ್ಸಿಡಿ ಪಡೆದು ದೇವದುರ್ಗ ತಾಲೂಕಿನ ವಿವಿಧ ನರ್ಸರಿಗಳು ರೈತರಿಗೆ ಮೆಣಸಿನಕಾಯಿ ಬಿತ್ತನೆ ಬೀಜಗಳನ್ನು ನೀಡಿವೆ. ಆದರೆ, ಬೀಜದಲ್ಲಿ ಗುಣಮಟ್ಟ ಇರದ ಕಾರಣ ಮೆಣಸಿನಕಾಯಿ ಬೆಳೆ ಕೈಗೆ ಬಾರದಂತಾಗಿದೆ. ಇದರಿಂದಾಗಿ ರೈತರು ಅಪಾರ ನಷ್ಟಕ್ಕೆ ಗುರಿಯಾಗಿದ್ದಾರೆ. ಈ ಕುರಿತು ತೋಟಗಾರಿಕೆ ಇಲಾಖೆಗೆ ದೂರು ನೀಡಿದರೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದು, ರೈತರಿಗೆ ನಷ್ಟ ಪರಿಹಾರ ಕೊಡುವವರು ಯಾರು? ಕೂಡಲೇ ರೈತರಿಗೆ ಆಗಿರುವ ನಷ್ಟಕ್ಕೆ ಜಿಲ್ಲಾಡಳಿತ ಪರಿಹಾರವನ್ನು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪದಾಧಿಕಾರಿಗಳಾದ ಶರಣಗೌಡ ಅರಷಣಗಿ, ಮರಿಲಿಂಗ ಪಾಟೀಲ್, ಜಹೀರುದ್ದೀನ್ ನಾಗುಂಡಿ, ಹನುಮಂತರಾಯ ಇದ್ದರು.