

ರಾಯಚೂರು: ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುವುದೇ ಬಿಜೆಪಿ ಕೆಲಸವಾಗಿಬಿಟ್ಟಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ಎಸ್ ಬೊಸರಾಜು ಹೇಳಿದರು.
ರಾಯಚೂರು ನಗರಸಭೆಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, ರಾಜ್ಯದಲ್ಲಿ ಮತ್ತೆ ಆಪರೇಶನ್ ಕಮಲ ನಡೆಯುತ್ತಿದೆ. ನಮ್ಮ ಗಮನಕ್ಕೂ ಇದೆ. ಬಿಜೆಪಿ ಯಾರ ಯಾರನ್ನು ಸಂಪರ್ಕಿಸಿದ್ದಾರೆ ಅಂತ ಗೊತ್ತಿದೆ. ಆದರೆ ಪಕ್ಷದ ಯಾವ ಶಾಸಕರೂ ಅದಕ್ಕೆ ಅವಕಾಶ ನೀಡುವುದಿಲ್ಲ. ಆಪರೇಷನ್ ಕಮಲ ವಿಫಲವಾಗಲಿದೆ, ಬಿಜೆಪಿಗರು ಸಿದ್ದರಾಮಯ್ಯಗೆ ಮಸಿ ಬಳೆದು ಅವರನ್ನ ತೆಗೆಯಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಆಪರೇಷನ್ ಕಮಲ ಆಗುತ್ತಾ?; ವಿಜಯೇಂದ್ರ ರಿಯಾಕ್ಷನ್ ನೋಡಿ
ಖರ್ಗೆ ಕುಟುಂಬದ ಸಿದ್ಧಾರ್ಥ ಸಂಸ್ಥೆಗೆ ಜಮೀನು ಮಂಜೂರು ವಿಚಾರಕ್ಕೆ ಸಂಬಂಧಿಸಿದಂತೆ ಖರ್ಗೆ ಅವರು ಆಸ್ತಿ ಮಾಡಬೇಕಿದ್ರೆ 50 ವರ್ಷದಲ್ಲಿ ಏನು ಬೇಕಿದ್ರೂ ಮಾಡಬಹುದಿತ್ತು. ಈಗಾಗಲೇ ಇಲಾಖೆ ಸಚಿವರು ಸ್ಪಷ್ಟೀಕರಣ ನೀಡಿದ್ದಾರೆ ಎಂದರು.
ದರ್ಶನ ಆದರೂ ಬೇರೆ ಯಾರಾಗಿದ್ದರೂ ಕೈದಿಗಳೇ. ಬೆಂಗಳೂರಿನ ಜೈಲಿನಲ್ಲಿ ಅಕ್ರಮ ಬೆಳಕಿಗೆ ಬಂದ ಬಳಿಕ ಅಧಿಕಾರಿಗಳ ಅಮಾನತ್ತು ಮಾಡಿದ್ದಾರೆ. ದರ್ಶನ ವಿಚಾರಕ್ಕೂ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ವಿಚಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಕುಮಾರಸ್ವಾಮಿ ಹಾಗೂ ಅವರ ತಂದೆ ದ್ವೇಷದ ರಾಜಕಾರಣ ಮಾಡುತ್ತಾರೆ. ಹತ್ತಾರು ಸುಳ್ಳು ಹೇಳಿಕೆಗಳನ್ನು ನಿಡುವ ಹೆಚ್ಡಿಕೆ ಹಿಟ್ ಆಂಡ್ ರನ್ ಕೇಸ್ ಇದ್ದಂತೆ ಎಂದು ವ್ಯಂಗ್ಯವಾಡಿದರು.
ಆರು ತಿಂಗಳಲ್ಲಿ ಇಲ್ಲಿನ ಸರ್ಕಾರ ತೆಗೆತೀವಿ ಅಂತ ಅಮೀತ್ ಶಾ ಮೋದಿ ಅವ್ರಿಗೆ ಆಶ್ವಾಸನೆ ಕೊಟ್ಟಿದ್ದಾರೆ. ಆದ್ದರಿಂದಲೇ ರಾಜ್ಯ ಸರ್ಕಾರವನ್ನು ಅಸ್ತಿರಗೊಳಿಸಲು ಈ ರೀತಿಯ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಇ.ಡಿ ಬಳಕೆಯಾಯ್ತು, ಈಗ ಶಾಸಕರ ಖರೀದಿ ಪ್ರಯತ್ನ ನಡೆದಿದೆ ಎಂದರು.