

ರಾಯಚೂರು: ಮನೆಯನ್ನು ಸ್ವಚ್ಛವಾಗಿಟ್ಟುಕೊಂಡಂತೆ ನಮ್ಮ ಸುತ್ತಮುತ್ತಲಿನ ವಾತವರಣವನ್ನು ಅಷ್ಟೆ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಸಲಹೆ ನೀಡಿದರು.
ನಗರದ ಶೆಟ್ಟಿಬಾವಿ ವೃತ್ತದಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ನೈಋತ್ಯ ರೈಲ್ವೆಯಿಂದ ಸ್ವಚ್ಛತಾ ಅಭಿಯಾನ
ನಗರದ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸ್ವಚ್ಛತೆಯನ್ನು ಕಾಪಾಡುವಲ್ಲಿ ಸ್ಥಳೀಯ ಸಂಸ್ಥೆಗಳ ಕಾರ್ಯದ ಜತೆಗೆ ಸಾರ್ವಜನಿಕರ ಅಹಕಾರವು ಅತ್ಯಗತ್ಯ ಎಂದು ತಿಳಿಸಿದರು.
ಸ್ವಚ್ಛತೆಗೆ ಹೆಚ್ಚಿನ ಜಾಗೃತಿಯ ಅವಶ್ಯಕತೆಯಿದೆ. ಕಳೆದ ವರ್ಷದಿಂದ ವಾರ್ಡ್‌ವಾರು ಪೌರಕಾರ್ಮಿಕರನ್ನು ಒಗ್ಗೂಡಿಸಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಆದರೂ ಸ್ವಚ್ಛತೆ ಮಾಡಿದ ಸ್ಥಳಗಳಲ್ಲಿಯೇ ಮತ್ತೆ ಅಸ್ವಚ್ಛತೆ ಕಂಡುಬರುತ್ತಿದ್ದು, ಜನರು ಜಾಗೃತರಾಗಿ ಕಸವನ್ನು ಎಲ್ಲಂದರಲ್ಲಿ ಎಸೆಯಬಾರದು ಎಂದು ತಿಳಿಸಿದರು.
ಪ್ರತಿ ಮನೆಯಿಂದಲೂ ಕಸ ಸಮರ್ಪಕ ವೀಲೆವಾರಿ ಆಗಬೇಕಿದೆ. ಜೊತೆಗೆ ನಗರದಲ್ಲಿನ ವ್ಯಾಪಾರಸ್ಥರು, ಅಂಗಡಿಗಳು, ಆಸ್ಪತ್ರೆ ಸೇರಿದಂತೆ ಎಲ್ಲಾ ಕಡೆಯಿಂದ ಕಸ ಶೇಖರಣೆ ಮಾಡಿ ವೀಲೆವಾರಿ ಮಾಡಲು ಸಮನ್ವಯ ಸಾಧಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಸ್ಮಿತಾ ಅಕ್ಕ, ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಉಪಾಧ್ಯಕ್ಷ ಸಾಜೀದ್ ಸಮೀರ್, ನಗರಸಭೆ ಹಿರಿಯ ಸದಸ್ಯ ಜಯಣ್ಣ, ಪ್ರಮುಖರಾದ ಮಹಮದ್ ಶಾಲಂ, ಮೌಲಾನ ಮೌಲಿ, ಸೈಯದ್ ಚಾಂದ್ ವೀರ ಹುಸೇನ್, ಸೈಯದ್ ಅಲಿ, ಜಿಂದಪ್ಪ, ದರೂರ ಬಸವರಾಜ, ಅನಿತಾ ತಿಮ್ಮಾರೆಡ್ಡಿ, ಹೇಮಲತಾ ಬೂದೆಪ್ಪ, ಬಿ.ರಮೇಶ, ತಿಮ್ಮರೆಡ್ಡಿ, ಹರಿಬಾಬು, ತಿಮ್ಮಪ್ಪ ನಾಯಕ, ನರಸರೆಡ್ಡಿ, ಭೀಮರಾಯ, ಸೇರಿದಂತೆ ಇತರರಿದ್ದರು.