

ಮುಂಗಾರು ಬಿತ್ತನೆಗೆ ಭರದ ಸಿದ್ಧತೆ
ಶಿವಮೂರ್ತಿ ಹಿರೇಮಠ
ರಾಯಚೂರು: ಮುಂಗಾರು ಹಂಗಾಮಿನ ಬಿತ್ತನೆಗೆ ಜಿಲ್ಲೆಯ ರೈತರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂಗಾರು ಕೇರಳಕ್ಕೆ ಪ್ರವೇಶಿಸಿರುವುದರಿಂದ ಶೀಘ್ರ ಮಳೆಯಾಗುವ ಸಾಧ್ಯತೆಯಿದ್ದು, ಕೃಷಿ ಚಟುವಟಿಕೆ ಚುರುಕು ಪಡೆದಿದೆ.
ಮುಂಗಾರು ಮಳೆ ವಿಳಂಬವಾಗಿದ್ದರೂ ಉತ್ತಮ ಮಳೆ ಯಾಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಕಳೆದ ಹಂಗಾಮಿ ನಲ್ಲೂ ಸರಾಸರಿಗಿಂತ ಉತ್ತಮ ಮಳೆಯಾಗಿತ್ತು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 5.41 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಖುಷ್ಕಿ ಪ್ರದೇಶದಲ್ಲಿ 2.85 ಲಕ್ಷ ಹೆಕ್ಟೇರ್ ಹಾಗೂ ನೀರಾವರಿಯ 2.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಮುಂಗಾರಿನ ಆರಂಭದೊಂದಿಗೆ ಖುಷ್ಕಿ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆರಂಭವಾಗಲಿದ್ದು, ಕಾಲುವೆಗೆ ನೀರು ಹರಿಸಿದ ನಂತರ ಭತ್ತದ ನಾಟಿ ನಡೆಯಲಿದೆ. ರಾಯಚೂರು ತಾಲೂಕಿನಲ್ಲಿ 73,384 ಹೆಕ್ಟೇರ್ ಖುಷ್ಲಿ ಹಾಗೂ 26,400 ಹೆಕ್ಟೇರ್ ನೀರಾವರಿ ಜಮೀನಿನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಮಾನ್ವಿ ತಾಲೂಕಿನಲ್ಲಿ 32,930 ಹೆಕ್ಟೇರ್ ಖುಷ್ಕಿ, 28,574 ಹೆಕ್ಟೇರ್ ನೀರಾವರಿ, ಸಿರವಾರ ತಾಲೂಕಿನಲ್ಲಿ 25,205 ಹೆಕ್ಟೇರ್ ಖುಷ್ಕಿ, 14,993 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ದೇವದುರ್ಗ ತಾಲೂಕಿನಲ್ಲಿ 48,232 ಹೆಕ್ಟೇರ್ ಖುಷ್ಕಿ, 73,457 ಹೆಕ್ಟೇರ್ ನೀರಾವರಿ, ಲಿಂಗಸುಗೂರು ತಾಲೂಕಿನಲ್ಲಿ 45,597 ಹೆಕ್ಟೇರ್ ಖುಷ್ಕಿ, 15,534 ಹೆಕ್ಟೇರ್ ನೀರಾವರಿ ಹಾಗೂ ಸಿಂಧನೂರು ತಾಲೂಕಿನಲ್ಲಿ 64,759 ಹೆಕ್ಟೇರ್ ಖುಷ್ಕಿ, 81,943 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ 1,930 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ನೀರಾವರಿ ಪ್ರದೇಶದಲ್ಲಿ ರೈತರು ಭತ್ತದ ಮಡಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮುಂಗಾರು ಹಂಗಾಮಿಗೆ 4,409 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಭತ್ತ 685 ಕ್ವಿಂಟಾಲ್, ತೊಗರಿ 648, ಸಜ್ಜೆ 2.70 ಕ್ವಿಂಟಾಲ್, ಮೆಕ್ಕೆಜೋಳ 11.66 ಕ್ವಿಂಟಾಲ್, ಸೂರ್ಯಕಾಂತಿ 71.58 ಕ್ವಿಂಟಾಲ್ ಸೇರಿ ಒಟ್ಟು 1,436 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇದೆ. ಪ್ರಮುಖವಾಗಿ ಭತ್ತ, ತೊಗರಿ, ಸೂರ್ಯಕಾಂತಿ ಬಿತ್ತನೆ ಬೀಜಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ.
ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 2.25 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯವಿದೆ. ಜೂನ್‌ನಲ್ಲಿ 96,757 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದೆ. ಪ್ರಸ್ತುತ 39,858 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದೆ. 23,244 ಮೆಟ್ರಿಕ್ ಟನ್ ಯೂರಿಯಾ, 10,431 ಮೆಟ್ರಿಕ್ ಟನ್ ಡಿಎಪಿ, 6,019 ಮೆಟ್ರಿಕ್ ಟನ್ ಎನ್‌ಪಿಕೆ, 163 ಮೆಟ್ರಿಕ್ ಟನ್ ಎಸ್‌ಎಸ್‌ಪಿ ರಸಗೊಬ್ಬರ ಜಿಲ್ಲೆಗೆ ಸರಬರಾಜು ಆಗಿದೆ. ಆಗಸ್ಟ್ ನಲ್ಲಿ 44,012 ಮೆಟ್ರಿಕ್ ಟನ್, ಸೆಪ್ಟೆಂಬರ್‌ನಲ್ಲಿ 43,233 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆಯಿದೆ.
ರೈತರಿಗೆ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಜತೆಗೆ ಅಗತ್ಯವಿರುವ ಕಂಪನಿಗಳ ಬಿತ್ತನೆ ಬೀಜ ವಿತರಣೆಗೆ ಕ್ರಮಕೈಗೊಳ್ಳಬೇಕು. ಜಿಲ್ಲಾವಾರು ವಾತಾವರಣಕ್ಕೆ ತಕ್ಕಂತೆ ಬಿತ್ತನೆ ಬೀಜದ ತಳಿ ಬೇರೆಯಾಗಲಿದ್ದು, ರಾಯಚೂರು ಜಿಲ್ಲೆಯ ರೈತರ ಬೇಡಿಕೆ ಅನುಸಾರ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲು ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.| ಎನ್.ಎಸ್.ಬೋಸರಾಜು ಸಣ್ಣ ನೀರಾವರಿ ಸಚಿವ
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆಯ ಗುರಿಗೆ ತಕ್ಕಂತೆ ಬಿತ್ತನೆ ಬೀಜ ಗಳನ್ನು ದಾಸ್ತಾನು ಮಾಡಲಾಗಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುವುದು. ರಸಗೊಬ್ಬರ ವಿತರಣೆಗೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.| ಆರ್.ದೇವಿಕಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ, ರಾಯಚೂರು