

ರಾಯಚೂರು: ಪ್ರಸ್ತುತ ದಿನಮಾನಗಳಲ್ಲಿ ಸಾಹಿತ್ಯದ ವಿಚಾರದಲ್ಲಿ ಶ್ರವಣ ಪರಂಪರೆ ಚಾಲ್ತಿಯಲ್ಲಿದೆ. ಕವಿಗಳು, ಸಾಹಿತಿಗಳು, ವಚನಾಕಾರರು ತಮ್ಮ ವಾಗ್ವಿಳಾಸದಿಂದ ಇಂದಿಗೂ ಜೀವಂತವಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ ಸಿದ್ದರಾಮಯ್ಯ ಹೇಳಿದರು.
ನಗರದ ಕನ್ನಡ ಭವನದಲ್ಲಿ ಬರಹ ಪ್ರಕಾಶನ, ವಿಮಲಾ ಬಾಯಿ ನಿಜಾಮಕಾರಿ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಡಿ.ದೇವರಾಜು ಅರಸು ವಿಚಾರ ವೇದಿಕೆಯ ವತಿಯಿಂದ ಹಮ್ಮಿಕೊಂಡಿದ್ದ ಭಗತರಾಜ್ ನಿಜಾಮಕಾರಿ ಅವರ ‘ಭಗತನ ಪದಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಪರಿಚಯಿಸಿ ಭಾನುವಾರ ಮಾತನಾಡಿದರು.
ಸಮಾಜದಲ್ಲಿ ಚರಿತ್ರೆಗಳು ಘೋರತ್ವವನ್ನು ಪಡೆದುಕೊಂಡಿವೆ ಜತೆಗೆ ವರ್ತಮಾನದ ಕಾಲ ಹೇಳಲಾರದ, ತಾಳಲಾರದ ಭಯ ಸಂಕಟವನ್ನು ಉಂಟು ಮಾಡುತ್ತಿದೆ. ರಾಜಕೀಯದಲ್ಲಿ ಸಮಾಜದ ಹಿತಕ್ಕಿಂತ ಸ್ವಾರ್ಥಹಿತ ಹೆಚ್ಚಾಗಿ ಹೋಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವವು ಸಂಕಷ್ಟದಲ್ಲಿದ್ದು, ನೈತಿಕತೆ ಕುಸಿದು ಹೋಗುತ್ತಿದೆ. ಸ್ವಾತಂತ್ರೃ ತಂದುಕೊಟ್ಟ ಗಾಂಧೀಜಿಯನ್ನು ಘೂಡ್ಸೆ ಒಂದು ಬಾರಿ ಕೊಂದಿದ್ದ ಆದರೆ ನೈತಿಕತೆಯನ್ನು, ಜವಾಬ್ದಾರಿಯನ್ನು ಮರೆತು ದಿನವೂ ಕೊಲ್ಲುತ್ತಾ ಬರುತ್ತಿದ್ದೇವೆ ಈ ಬಗ್ಗೆ ಭಗತರಾಜ ನಿಜಾಮಕಾರಿಯವರು ತ್ರಿಪದಿ ಸಂಕಲನದಲ್ಲಿ ಅತ್ಯಂತ ವಿಸ್ತೃತವಾಗಿ ತಿಳಿಸಿದ್ದಾರೆ ಎಂದರು.
ಈಗಿನ ರಾಜಕಾರಣಿಗಳು ಜಾತಿಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆಯೇ ಹೊರತು ಜಾತಿಗಳ ಉದ್ದಾರಕ್ಕಾಗಿ ಅಲ್ಲ. ಜನರು ಇದನ್ನೂ ಅರ್ಥೈಸಿಕೋಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ಬರಹವೆಂಬುವುದು ಭದ್ಧತೆಯಾಗಬೇಕಾಗಿದೆ. ಬರವಣಿಗೆಯಲ್ಲಿ ಅರಿವು ಮತ್ತು ಕ್ರಿಯೆಗಳಿದ್ದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ಸಿಗುತ್ತದೆ. ನಿಜಾಮಕಾರಿಯವರ ಬದುಕು ಮತ್ತು ದಾಂಪತ್ಯ ಜೀವನವನ್ನು ಮೂರು ಸಾಲಿನ ಚೌಕಟ್ಟಿನಲ್ಲಿ ಜೀವನದ ಅನುಭಾವವನ್ನು ತಿಳಿಸಿದ್ದಾರೆ ಎಂದು ಕೃತಿ ಬಗ್ಗೆ ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಾಗು ಸಾಹಿತಿ ಭಗತರಾಜ್ ನಿಜಾಮಕಾರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಪ್ರಮುಖರಾದ ತಾಯಪ್ಪ ಹೊಸೂರು, ಎಂ.ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.