

ರಾಯಚೂರು: ರೈತರ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೆತ್ತಿಕೋಂಡಿರುವುದು ರೈತ ವಿರೋಧಿ ನಡೆಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ(ಕೋಡಿಹಳ್ಳಿ ಚಂದ್ರಶೇಖರ್ ಬಣ)ದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಹೋರಾಟಗಳನ್ನು ಸಂಘದಿಂದ ಮಾಡಲಾಗಿದ್ದು, ಆದರೆ ರಾಜ್ಯ ಸರ್ಕಾರ ಕೃಷಿ ಕಾಯ್ದೆ ರದ್ದತಿಗೆ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಜತೆಗೆ ರೈತರ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಂದ ವಿದ್ಯುತ್ ಶುಲ್ಕದ ಹೆಸರಿನಲ್ಲಿ ನೇರ ಹಣ ಲೂಟಿ ಮಾಡಲಾಗುತ್ತದೆ ಎಂದು ದೂರಿದರು.
ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಹಾಗೂ ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸೆ.4ರಂದು ಜಿಲ್ಲೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಗೆ ರೈತರು, ರೈತಪರ ಸಂಘಟನೆಗಳು ಬೆಂಬಲ ನೀಡುವಂತೆ ಶಿವಪುತ್ರಗೌಡ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಹನುಮಂತಪ್ಪ, ಬಸವರಾಜ್, ಲಕ್ಷ್ಮಣ, ಅಮರೇಶ ಸೇರಿದಂತೆ ಇತರರಿದ್ದರು.