

ರಾಯಚೂರು: ದರ್ವೇಶ್ ಗ್ರೂಪ್ ಕಂಪನಿಯಿಂದ ಹೂಡಿಕೆದಾರರಿಗೆ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೂವರು ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಸೋಮವಾರ ಕೋರ್ಟ್ಗೆ ಹಾಜರುಪಡಿಸಿ, ಎ-4 ಆರೋಪಿ ಬಬ್ಲೂನನ್ನು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಮುಂದುವರೆಸಿದ್ದಾರೆ.
ಪ್ರಕರಣದ ಆರೋಪಿ-4 ಬಬ್ಲೂ, ಅಜರ್ ಹಾಗೂ ಮೋಸಿನ್ ಎನ್ನುವವರನ್ನು ಅಧಿಕಾರಿಗಳು ಬಂಧಿಸಿದ್ದು, ಬಬ್ಲೂನನ್ನು ಐದು ದಿನಗಳ ಕಾಲ ಕಸ್ಟಡಿಯಲ್ಲಿರಿಸಿಕೊಂಡು ವಿಚಾರಣೆ ನಡೆಸಲಿದ್ದಾರೆ. ಉಳಿದ ಅಜರ್ ಮತ್ತು ಮೋಸಿನ್ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಹೂಡಿಕೆದಾರರಿಗೆ ವಂಚನೆ ಮಾಡಿದ್ದ ಹಿನ್ನೆಲೆಯಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಜು.22ರಂದು ಪ್ರಕರಣ ದಾಖಲಾದ ಬಳಿಕ ಬಂಧನವಾದ ಮೂರು ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿದ್ದರು. ಪ್ರಮುಖ ಆರೋಪಿಯೊಂದಿಗೆ ಎ-4 ಆರೋಪಿ ಬಬ್ಲೂ ನೇರವಾದ ನಂಟನ್ನು ಹೊಂದಿದ್ದ ಎಂಬ ಹಿನ್ನೆಲೆಯಲ್ಲಿ ಬಬ್ಲೂನನ್ನು ಆ.2ರವರೆಗೆ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಿದ್ದಾರೆ.
ಸಿಐಡಿ ವಿಚಾರಣೆಯಲ್ಲಿದ್ದ ಮೂರು ಆರೋಪಿಗಳ ಹೇಳಿಕೆಯ ಆಧಾರದ ಮೇಲೆ ಎ-2 ಆರೋಪಿ ವಾಸೀಂನ ಮನೆಯ ಮೇಲೆ ದಾಳಿ ಮಾಡಿ 2 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಅದೇ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ 6 ಕೋಟಿ ರೂ. ಇರುವ ಬಗ್ಗೆ ಮಾಹಿತಿ ಪಡೆದ ಸಿಐಡಿ ಬ್ಯಾಂಕ್ ಖಾತೆಯನ್ನು ಸೀಜ್ ಮಾಡಿದ್ದಾರೆ.
ಇದೀಗ ಎ-1 ಆರೋಪಿ ಮಹ್ಮದ್ ಹುಸೇನ್ ಶುಜಾ, ಎ-2 ಸೈಯದ್ ವಾಸೀಂ ಹಾಗೂ ಎ-3 ಆರೋಪಿ ಮಸ್ಕಿನ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.