ಆಶ್ರಯ ಕಾಲನಿಯಲ್ಲಿನ ಶೆಡ್ ತೆರವು, ಪೊಲೀಸರಿಂದ ಲಘು ಲಾಠಿ ಪ್ರಹಾರ

180121 Raichur Asaraya Colony Protest
ರಾಯಚೂರಿನ ಚಂದ್ರಬಂಡಾ ರಸ್ತೆಯಲ್ಲಿರುವ ಹಳೆ ಆಶ್ರಯ ಕಾಲೋನಿಯಲ್ಲಿರುವ ಅನಧಿಕೃತ ಶೆಡ್‌ಗಳನ್ನು ಸೋಮವಾರ ನಗರಸಭೆ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ ಜೆಸಿಬಿ ಅಡ್ಡ ನಿಂತು ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿರುವ ಮಹಿಳೆಯರು.
Published on

ರಾಯಚೂರು: ಆಶ್ರಯ ಕಾಲನಿಯಲ್ಲಿನ ಶೆಡ್ ತೆರವು, ಅನಧಿಕೃತವಾಗಿ ವಾಸಿಸುತ್ತಿರುವವರ ಹೊರ ಕಳಿಸುವ ಪ್ರಕ್ರಿಯೆ ವೇಳೆ ಸೋಮವಾರ ಅಧಿಕಾರಿಗಳು ಮತ್ತು ನಿವಾಸಿಗಳ ನಡುವೆ ವಾಗ್ವಾದ ನಡೆದು, ಪೊಲೀಸರು ಮಧ್ಯೆ ಪ್ರವೇಶಿಸಿ ಲಘು ಲಾಠಿ ಪ್ರಹಾರ ನಡೆಸಿದರು.

ನಗರದ ಚಂದ್ರಬಂಡಾ ರಸ್ತೆಯಲ್ಲಿರುವ ಹಳೆಯ ಆಶ್ರಯ ಕಾಲನಿಯಲ್ಲಿ ಅನಧಿಕೃತವಾಗಿ ಶೆಡ್ ಹಾಕಲಾಗಿದೆ. ಹಕ್ಕುಪತ್ರವಿಲ್ಲದೆ ಮನೆಗಳಲ್ಲಿ ಜನರ ವಾಸವಾಗಿದ್ದಾರೆ. ಆದ್ದರಿಂದ ತೆರವು ಗೊಳಿಸಲು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಆದೇಶ ನೀಡಿದ್ದರಿಂದ ನಗರಸಭೆ ಅಧಿಕಾರಿಗಳು ಜೆಸಿಬಿಯೊಂದಿಗೆ ಕಾರ್ಯಾಚರಣೆಗೆ ಇಳಿದಾಗ ಈ ಘಟನೆ ನಡೆದಿದೆ.

ನಡೆದದ್ದೇನು?:
ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಆದೇಶದಂತೆ ಜೆಸಿಬಿಯೊಂದಿಗೆ ಸ್ಥಳಕ್ಕೆ ಬಂದ ನಗರಸಭೆ ಅಧಿಕಾರಿಗಳಿಗೆ ಪ್ರತಿರೋಧ ಒಡ್ಡಿದ ನಿವಾಸಿಗಳು, ನೋಟಿಸ್ ನೀಡದೆ ಏಕಾಏಕಿ ಕಾರ್ಯಾಚರಣೆ ನಡೆಸಿದರೆ ನಾವು ಬೀದಿ ಪಾಲಾಗಬೇಕಾಗುತ್ತದೆ ಎಂದು ಆಕೋಶ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು-ನಿವಾಸಿಗಳ ನಡುವೆ ವಾಗ್ವಾದ ನಡೆಯಿತು. ಮನೆಯಲ್ಲಿದ್ದವರನ್ನು ಅಧಿಕಾರಿಗಳು ಬಲವಂತವಾಗಿ ಹೊರಹಾಕುವಾಗ ಮಹಿಳೆಯರು ಮತ್ತು ಮಕ್ಕಳು ಕಣ್ಣೀರು ಹಾಕುತ್ತಲೇ ಮನೆ ಬೀಳಿಸಬೇಕು ಎಂದು ಬೇಡಿಕೊಂಡರು. ಫಲಾನುಭವಿಗಳಲ್ಲದವರು ಮನೆಗಳಲ್ಲಿ ವಾಸವಾಗಿದ್ದಾರೆ. ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅನಧಿಕೃತವಾಗಿರುವವರನ್ನು ಮಾತ್ರ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿ ಹೇಳಿದರು. ಸ್ಥಳದಲ್ಲಿ ನೂರಾರು ಜನರು ಗುಂಪು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರಿಂದ, ಪೊಲೀಸರು ಮಧ್ಯೆ ಪ್ರವೇಶಿಸಬೇಕಾಗಿ ಬಂತು.

ವಿಷಯ ತಿಳಿದ ಕಾಂಗ್ರೆಸ್ ಮುಖಂಡರ ನಿಯೋಗ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯಚರಣೆ ನಿಲ್ಲಿಸಲು ಅಧಿಕಾರಿಗಳಿಗೆ ಮನವಿ ಮಾಡಿತು. ಆದರೂ ಐದಾರು ಶೆಡ್‌ಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಿದಾಗ ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಜೆಸಿಬಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿ ಪ್ರಸಂಗವೂ ನಡೆಯಿತು. ಸ್ಥಳದಲ್ಲಿ ಇನ್ನೂ ಉದ್ವಿಗ್ನ ವಾತಾವರಣವಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ನಗರಸಭೆ ಪ್ರಭಾರ ಪೌರಾಯುಕ್ತ ಎಚ್.ವೆಂಕಟೇಶ, ತಹಸೀಲ್ದಾರ್ ಡಾ.ಹಂಪಣ್ಣ, ಡಿವೈಎಸ್ಪಿ ಶಿವನಗೌಡ ಪಾಟೀಲ್ ಹಾಗೂ ನಗರಸಭೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net