ಜಿಯು-ಜಿಟ್ಸುವಿನಲ್ಲಿ ಎದುರಾಳಿಯನ್ನು ಸೋಲಿಸಿದ ರಾಹುಲ್ ಗಾಂಧಿ: ಹಲ್​ಚಲ್ ಸೃಷ್ಟಿಸಿದ ವೀಡಿಯೋ

rahul gandhi
Published on: 

ನವದೆಹಲಿ: ರಾಹುಲ್ ಗಾಂಧಿ ಎದುರಾಳಿ ಆಟಗಾರರನ್ನು ಸೋಲಿಸಲು ಮಾರ್ಷಲ್ ಆರ್ಟ್ಸ್ ಜಿಯು-ಜಿಟ್ಸು ತಂತ್ರವನ್ನು ಬಳಸುತ್ತಿದ್ದು, ಅವರು ಮಾರ್ಷಲ್ ಆರ್ಟ್ಸ್ ಟ್ರಿಕ್ಸ್ ಕಲಿಯುತ್ತಿರುವುದನ್ನು ಕಾಣಬಹುದು. ಇದರ ವೀಡಿಯೋವನ್ನು ರಾಹುಲ್​ ತಮ್ಮ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ಕ್ರೀಡಾಪಟುವಾಗಿ ಕಾಣಿಸಿಕೊಂಡು ಕ್ರೀಡಾ ದಿನದ ಶುಭಾಶಯ ತಿಳಿಸಿದ್ದಾರೆ.

2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ರಾಹುಲ್ ಗಾಂಧಿ ಇತ್ತೀಚೆಗೆ ತಮ್ಮ ನಿಲುವು ಬದಲಿಸಿ ಸಾರ್ವಜನಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಭಾರತ್ ಜೋಡೋ ಯಾತ್ರೆ ಆಯೋಜಿಸಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮತ್ತು ನಂತರ ಮಣಿಪುರದಿಂದ ಗುಜರಾತ್‌ವರೆಗೆ ಯಾತ್ರೆ ಸಾಗಿತ್ತು. ಇದು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ವಲ್ಪ ಮಟ್ಟಿಗೆ ಲಾಭವನ್ನು ತಂದುಕೊಟ್ಟಿತ್ತು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂಖ್ಯೆ 99ಕ್ಕೆ ಏರಿತು. ಜೋಡೋ ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿ ದೇಶದ ವಿವಿಧ ಸಾಮಾಜಿಕ ಗುಂಪುಗಳ ಜನರನ್ನು ಭೇಟಿ ಮಾಡಿದರು. ಆ ಕ್ರಮದಲ್ಲಿ ವಿವಿಧ ರೀತಿಯ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ.

ಆದರೆ ಹೊಸದಾಗಿ ಬಿಡುಗಡೆಯಾಗಿರುವ ವಿಡಿಯೋ ಕೂಡ ಭಾರತ್ ಜೋಡೋ ಯಾತ್ರೆಯ ಭಾಗವಾಗಿದೆ ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ರಾಹುಲ್ ಭೇಟಿಯ ಅಂಗವಾಗಿ ಅವರು ಮಾರ್ಷಲ್ ಆರ್ಟ್ ಜಿಯು-ಜಿಟ್ಸು ಅಭ್ಯಾಸ ಮಾಡಿದರು. ಇದರಲ್ಲಿ ರಾಹುಲ್ ಕೂಡ ಕಪ್ಪು ಪಟ್ಟಿಯನ್ನು ಹೊಂದಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಯುವಕರಲ್ಲಿ ಹಿಂಸಾಚಾರದ ಬದಲು ಸಜ್ಜನಿಕೆ ಬೆಳೆಸಬೇಕು ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ.