ರಾಹುಲ್‌ ಗಾಂಧಿಯೇ ಪಕ್ಷ ಮುನ್ನಡೆಸಲಿ: ಸಚಿನ್‌ ಪೈಲಟ್‌

rahul
Published on

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮಾಡುತ್ತಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ವೈಖರಿಯನ್ನು ನೋಡಿದರೆ, ಕಾಂಗ್ರೆಸ್‌ ಪಕ್ಷವನ್ನು ಅವರೇ ಮುಂದುವರೆಸಬೇಕು ಎನ್ನುವುದು ಸಾಬೀತಾಗುತ್ತದೆ ಎಂದು ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿದ್ದಾರೆ.

ರಾಹುಲ್‌ ಗಾಂಧಿಯವರು ಸಮರ್ಥ ನಾಯಕ, ಅವರು ಮತ್ತೊಮ್ಮೆ ಪಕ್ಷದ ಅಧ್ಯಕ್ಷರಾಗಿ ನಮ್ಮನ್ನು ಮುನ್ನಡೆಸಬೇಕು ಎಂಬುದೇ ನಮ್ಮ ಬೇಡಿಕೆ ಎಂದು ಹೇಳಿದ್ದಾರೆ.

ಚೀನಾ ಗಡಿ ವಿವಾದ ಹಾಗೂ ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ವಿರುದ್ಧ ರಾಹುಲ್‌ ಅವರು ತೀಕ್ಷ್ಣ ವಾಗ್ದಾಳಿ ನಡೆಸುತ್ತಿದ್ದಾರೆ. ಅವರ ಮಾತನ್ನು ನೋಡಿದರೆ ಅವರೊಬ್ಬ ಸಮರ್ಥ ನಾಯಕ ಎನ್ನುವುದು ತಿಳಿದುಬರುತ್ತದೆ. ಆದ್ದರಿಂದ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವರೇ ಸರಿಯಾದ ಅಭ್ಯರ್ಥಿಯಾಗಿದ್ದು, ಅವರೇ ನಮ್ಮ ನಾಯಕರಾಗಬೇಕು ಎಂದು ಪೈಲಟ್‌ ಹೇಳಿದ್ದಾರೆ.

ಗಡಿ ಪರಿಸ್ಥಿತಿ ಬಗ್ಗೆ ಇನ್ನೂ ಗೊಂದಲವಿದೆ. ಇದೇ ವೇಳೆ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ನಿರಂತರವಾಗಿ ಏರುತ್ತಿವೆ ಮತ್ತು ಜನರ ಮೇಲೆ ಒತ್ತಡ ಹೇರುತ್ತಿವೆ. ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳುವಂತೆ ನಾವು ಕೇಂದ್ರವನ್ನು ಒತ್ತಾಯಿಸುತ್ತೇವೆ. ಆದರೆ ಈ ನಡುವೆಯೇ ರಾಹುಲ್‌ ಗಾಂಧಿಯವರು ಸರಿಯಾಗಿ ತಿರುಗೇಟು ನೀಡಿದ್ದಾರೆ. ಸಮರ್ಥ ನಾಯಕನ ಲಕ್ಷಣವು ಅವರಲ್ಲಿ ಗೋಚರವಾಗುತ್ತಿದೆ ಎಂದು ಪೈಲಟ್ ಹೇಳಿದರು. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net