

ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಶುಕ್ರವಾರ ಫಾಕ್ಸ್ಕಾನ್ ಛೇರ್ಮನ್ ಯಂಗ್ ಲಿಯು ಅವರನ್ನು ಭೇಟಿ ಮಾಡಿದರು.
‘ಹೋನ್ ಹಾಯ್ ಟೆಕ್ನಾಲಜಿ ಗ್ರೂಪ್ನ (ಫಾಕ್ಸ್ಕಾನ್) ಛೇರ್ಮನ್ ಯಂಗ್ ಲಿಯು ಅವರನ್ನು ಭೇಟಿ ಮಾಡಿದ್ದು ಖುಷಿಯಾಯಿತು. ಭಾರತ ಮತ್ತು ಜಗತ್ತಿನ ಭವಿಷ್ಯದ ತಂತ್ರಜ್ಞಾನ ಬೆಳವಣಿಗೆ ಕುರಿತು ಚರ್ಚಿಸಿದೆವು ಎಂದು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಒಂದು ಪೋಸ್ಟ್ ಹಾಕಿ ವಿವರಿಸಿದ್ದಾರೆ.
ಸರಿಯಾದ ಪ್ರೋತ್ಸಾಹದಿಂದ ಭಾರತ ತಂತ್ರಜ್ಞಾನ ಮಾರುಕಟ್ಟೆ ಮುಂದಿನ ದಿನಗಳಲ್ಲಿ ಪ್ರಮುಖ ಸ್ಥಾವರದಲ್ಲಿರಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಫಾಕ್ಸ್ಕಾನ್ ಚೆನ್ನೈನ ಪೆರಂಬುದೂರಿನಲ್ಲಿ ಐಫೋನ್ ಅಸೆಂಬ್ಲಿಂಗ್ ಘಟಕ ಹೊಂದಿದೆ. ಕರ್ನಾಟಕ, ಆಂಧ್ರಪ್ರದೇಶದಲ್ಲೂ ತನ್ನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿದೆ. ಚೆನ್ನೈನಲ್ಲಿ ಅದು ಐಫೋನ್ಗಳ ಅಸೆಂಬ್ಲಿಂಗ್ ಮಾಡುತ್ತದೆ. ಗೂಗಲ್ನ ಪಿಕ್ಸೆಲ್ ಫೋನ್ಗಳನ್ನು ತಯಾರಿಸಲೂ ಫಾಕ್ಸ್ಕಾನ್ ಗುತ್ತಿಗೆ ಪಡೆಯುವ ಸಾಧ್ಯತೆ ಇದೆ.
ತೈವಾನ್ ಮೂಲದ ಫಾಕ್ಸ್ಕಾನ್ ಸಂಸ್ಥೆ ತನ್ನದೇ ಬ್ರ್ಯಾಂಡ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಹೊಂದಿಲ್ಲ. ಆ್ಯಪಲ್ ಇತ್ಯಾದಿ ಎಲೆಕ್ಟ್ರಾನಿಕ್ಸ್ ಕಂಪನಿಗಳ ಉತ್ಪನ್ನಗಳನ್ನು ಗುತ್ತಿಗೆ ಆಧಾರದಲ್ಲಿ ತಯಾರಿಸಿಕೊಡುತ್ತದೆ. ಈ ರೀತಿಯಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆಯಲ್ಲಿ ವಿಶ್ವದ ಅತಿದೊಡ್ಡ ಕಂಪನಿ ಎನಿಸಿದೆ ಫಾಕ್ಸ್ಕಾನ್. ಆಪಲ್ನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಫಾಕ್ಸ್ ಕಾನ್ ಭಾರತದಲ್ಲಿ 40 ಸಾವಿರ ಉದ್ಯೋಗ ಸೃಷ್ಟಿಸಲು ಮುಂದಾಗಿದೆ.