

ದೆಹಲಿ: ಸಂಸತ್ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸರ್ಕಾರದಿಂದ ನೀಡಿರುವ ಅಧಿಕೃತ ಬಂಗಲೆಯನ್ನ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಹಾಲಿ ಲುಟೆನ್ಸ್ ಪ್ರದೇಶದ ತುಘಲಕ್ ಲೇನ್ನಲ್ಲಿರುವ ನಂ 12 ಬಂಗಲೆಯನ್ನ ಖಾಲಿ ಮಾಡುವಂತೆ ಲೋಕಸಭಾ ವಸತಿ ಸಮಿತಿಯೂ ನೋಟಿಸ್ ನೀಡಿದೆ ಎಂದು ತಿಳಿದು ಬಂದಿದೆ.
2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮೋದಿ ಉಪನಾಮದ ಬಗ್ಗೆ ವ್ಯಂಗ್ಯವಾಡಿದ್ದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಳೆದ ವಾರ ಸೂರತ್ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿತ್ತು.
ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿ ಲೋಕಸಭಾ ಕಾರ್ಯಾಲಯ ಆದೇಶ ಹೊರಡಿಸಿತ್ತು. ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ತಿಂಗಳೊಳಗೆ ಅಧಿಕೃತ ಸರ್ಕಾರಿ ಬಂಗಲೆಯನ್ನ ಖಾಲಿ ಮಾಡಬೇಕು ಎಂದು ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.