

BJP: ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿಪಿ ರಾಧಾಕೃಷ್ಣನ್ ಶುಕ್ರವಾರ(ಸೆ. 12) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಸಮಾರಂಭಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗೈರು ಹಾಜರಾಗಿದ್ದಕ್ಕಾಗಿ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ರಾಹುಲ್ ಗಾಂಧಿ ಭಾರತೀಯ ಸಂವಿಧಾನ, ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ. ಕಳೆದ ತಿಂಗಳು ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಭಾಗವಹಿಸಿದ್ದರು. ಇಂದು ಉಪರಾಷ್ಟ್ರಪತಿಗಳ ಪ್ರಮಾಣವಚನ ಸಮಾರಂಭವನ್ನು ಬಹಿಷ್ಕರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು, ಸಾಂವಿಧಾನಿಕ ಗಣ್ಯರ ಪ್ರಮಾಣವಚನ ಸ್ವೀಕಾರವನ್ನು ತಿರಸ್ಕರಿಸುವ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿರಲು ಅರ್ಹನಾಗಿದ್ದಾನೆಯೇ?, ರಾಹುಲ್ ಗಾಂಧಿಗೆ ಮಲೇಷ್ಯಾದಲ್ಲಿ ರಜೆಗೆ ಹೋಗಲು ಸಮಯವಿದೆ, ಆದರೆ ಅಧಿಕೃತ ಸಾಂವಿಧಾನಿಕ ಕಾರ್ಯಕ್ರಮಕ್ಕೆ ಬರಲಾಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಉಪರಾಷ್ಟ್ರಪತಿ ರಾಧಕೃಷ್ಣನ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು. ರಾಹುಲ್ ಗಾಂಧಿ ಪೂರ್ವ ನಿರ್ಧರಿತ ಪಕ್ಷದ ಕಾರ್ಯಕ್ರಮದ ನಿಮಿತ್ತ ಗುಜರಾತ್ ಪ್ರವಾಸ ಹಿನ್ನೆಲೆ ಗೈರಾಗಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಉದಿತ್ ರಾಜ್, ವಿರೋಧ ಪಕ್ಷದ ನಾಯಕರು ಪ್ರತಿಯೊಂದು ಕಾರ್ಯಕ್ರಮಕ್ಕೂ ಹಾಜರಾಗುವುದು ಕಡ್ಡಾಯವಲ್ಲ. ಅಂತಹ ಯಾವುದೇ ನಿಯಮವಿಲ್ಲ. ಕಾಂಗ್ರೆಸ್ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಪಕ್ಷವನ್ನು ಪ್ರತಿನಿಧಿಸಿದ್ದರು. ಬಿಜೆಪಿ ಸಂವಿಧಾನವನ್ನು ದ್ವೇಷಿಸುತ್ತದೆ. ಅವರು ಸಂವಿಧಾನವನ್ನು ಬುಡಮೇಲು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅದನ್ನು ಉಳಿಸಲು ಹೋರಾಡುತ್ತಿದ್ದಾರೆ. ಎಂದು ಹೇಳಿದ್ದಾರೆ.
2022 ರಲ್ಲಿ ನಡೆದಿದ್ದ ಜಗದೀಪ್ ಧನಕರ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಹೆಚ್ಚಿನ ವಿರೋಧ ಪಕ್ಷದ ನಾಯಕರು ಗೈರುಹಾಜರಾಗಿದ್ದರು. ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಜಗದೀಪ್ ಧನಕರ್ ಇಂದು ಸಮಾರಂಭದಲ್ಲಿ ಹಾಜರಿದ್ದರು. (ಏಜೆನ್ಸೀಸ್)