

ಬೆಂಗಳೂರು: ದಿಗ್ಗಜ ಬ್ಯಾಟರ್ ಹಾಗೂ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ 19 ವಯೋಮಿತಿಯ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಲ್ರೌಂಡ್ ನಿರ್ವಹಣೆ ತೋರುವ ಮೂಲಕ ಗಮನಸೆಳೆದಿದ್ದಾರೆ.
ಆತಿಥೇಯ ಜಮ್ಮು&ಕಾಶ್ಮೀರ ವಿರುದ್ಧ ಜಮ್ಮುವಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲಿಗೆ 2 ವಿಕೆಟ್ ವಿಕೆಟ್ ಕಬಳಿಸಿದ ಸಮಿತ್ ನಂತರ 98 ರನ್ (159 ಎಸೆತ, 13 ಬೌಂಡರಿ, 1 ಸಿಕ್ಸರ್) ಬಾರಿಸಿದರು.
ಸಮಿತ್ ಕೇವಲ 2 ರನ್ನಿಂದ ಶತಕವಂಚಿತರಾದರೆ, ಮತ್ತೋರ್ವ ಬ್ಯಾಟರ್ ಕಾರ್ತಿಕೇಯ ಕೆಪಿ 163 ರನ್ ಸಿಡಿಸಿದರು. ಇದರಿಂದ ಕಾಶ್ಮೀರದ 170 ರನ್ಗಳಿಗೆ ಪ್ರತಿಯಾಗಿ ಕರ್ನಾಟಕ 2ನೇ ದಿನದಂತ್ಯಕ್ಕೆ 5 ವಿಕೆಟ್ಗೆ 389 ರನ್ ಸೇರಿಸಿ ಇನಿಂಗ್ಸ್ ಮುನ್ನಡೆ ಸಾಧಿಸಿದೆ.