

ಭಟ್ಕಳ, ಮಳೆ, ರಘುನಾಥ ದೇವಸ್ಥಾನ, ಭಾಗಶಃ ಜಲಾವೃತ, Bhatkala, Rain, Raghunath Temple, Partially Flooded,
ಭಟ್ಕಳ: ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಇನ್ನೊಂದೆಡೆ ತಾಲೂಕಿನ ಅತಿ ಪುರಾತನ ರಘುನಾಥ ದೇವಸ್ಥಾನಕ್ಕೆ ಗುರುವಾರ ನೀರು ನುಗ್ಗಿ ಭಾಗಶಃ ಜಲಾವೃತವಾಗಿದೆ.
ಪಟ್ಟಣದ ರಘುನಾಥ ದೇವಸ್ಥಾನ ಅರ್ಧ ಭಾಗ ನೀರಿನಲ್ಲೇ ಮುಳುಗಿದೆ. ರಘುನಾಥ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು, ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದಿದೆ. ಗುರುವಾರದ ಮಳೆಯಿಂದಾಗಿ ತಾಲೂಕಿನಾದ್ಯಂತ 13 ಮನೆಗಳಿಗೆ ಹಾನಿಯಾಗಿದೆ. ಮಾರುಕೇರಿ ಕಿತ್ರೆಯ ನಿವಾಸಿ ಕೇಶವ ಸಣ್ಣು ಗೊಂಡ ಹಾಗೂ ಮಾರುಕೇರಿ ನಿವಾಸಿ ಮಂಗಳಿ ಗೋಯ್ದ ಗೊಂಡ, ತೆಂಗಾರ ನಿವಾಸಿ ಗಂಗಾ ಕುಪ್ಪಯ್ಯ ನಾಯ್ಕ, ಮುಂಡಳ್ಳಿ ನಿವಾಸಿ ನಾರಾಯಣಿ ಜಟ್ಟಪ್ಪ ನಾಯ್ಕ, ಶಿರಾಲಿ ಬಂಡಿಕಾಶಿ ನಿವಾಸಿ ಹಾದಿಯಮ್ಮ ಸುಕ್ರಯ್ಯ ನಾಯ್ಕ, ಮುಟ್ಟಳ್ಳಿ ನಿವಾಸಿ ಮಾಸ್ತಪ್ಪ ವೆಂಕಪ್ಪ ನಾಯ್ಕ, ಬಿಳಲಖಂಡ ನಿವಾಸಿ ನೂರ್ಜಹಾನ್ ಅಬ್ದುಲ್ ರಹೀಂ, ಜಾಲಿ ಶೆಡ್ಕುಳಿ ನಿವಾಸಿ ಲಕ್ಷ್ಮೀ ದುರ್ಗಪ್ಪ ನಾಯ್ಕ ಮತ್ತು ವೆಂಕಟಾಪುರ ನಿವಾಸಿ ನಾಗರಾಜ ದುರ್ಗಪ್ಪ ನಾಯ್ಕ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಾಲಿ ಮಾಸ್ತಿಕಟ್ಟೆಯ ಬೆಳೂರು ನೀರಿನ ಫ್ಯಾಕ್ಟರಿಯ ಮೇಲ್ಛಾವಣಿ ಹಾರಿ ಹೋಗಿದ್ದರಿಂದ ಯಂತ್ರೋಪಕರಣಗಳು ಹಾನಿಗೀಡಾಗಿವೆ.