ಮಂಗಳೂರು: ಬರಹಗಾರನಿಗೆ ಜ್ಞಾನ, ಅನುಭವದಷ್ಟೇ ಸಾಮಾಜಿಕ ಪ್ರಜ್ಞೆ, ಮಾನವೀಯ ಸಂವೇದನೆಯೂ ಅಗತ್ಯ. ಅದು ಬರಹವನ್ನು ಪರಿಪಕ್ವವಾಗಿಸುತ್ತದೆ. ಈ ನಿಟ್ಟಿನಲ್ಲಿ ಸಾಹಿತಿಗಳು ಸದಾ ಕಾರ್ಯೋನ್ಮುಖರಾಗಬೇಕು ಎಂದು ಕೆನರಾ ಸಮೂಹ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಎಂ.ರಂಗನಾಥ ಭಟ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ರಘು ಇಡ್ಕಿದು ಅವರ 31ನೇ ಕೃತಿ ‘ಅರಿಮುಡಿ- ತುಳು ಕೃತಿಗಳ ಕನ್ನಡ ವಿಮರ್ಶೆ- ಅವಲೋಕನ-ಸಮೀಕ್ಷೆ’ಯನ್ನು ಸೋಮವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಸದಾ ಅಧ್ಯಯನಶೀಲರಾಗಿ ವೈವಿಧ್ಯಮಯ ಕೃತಿಗಳ ಮೂಲಕ ರಘು ಇಡ್ಕಿದು ಅವರು ತುಳು, ಕನ್ನಡ ಸಾಹಿತ್ಯ ಲೋಕಕ್ಕೆ ಅಪೂರ್ವ ಕೊಡುಗೆ ನೀಡುತ್ತಿದ್ದಾರೆ ಎಂದರು.
ಕೆನರಾ ಪಿಯು ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಕೆ.ಎಂ ಮಾತನಾಡಿ, ಕ್ರಿಯಾಶೀಲ ಮನೋಭಾವದ ರಘು ಇಡ್ಕಿದು ಅವರ ಸಾಹಿತ್ಯ ಹಾಗೂ ಸ್ವಂತ ಪ್ರಕಾಶನದ ಮೂಲಕ ಕೃತಿ ರಚನಾ ಕಾರ್ಯ ಇತರರಿಗೆ ಮಾದರಿ. ತುಳು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪೂರ್ವ ಎಂದು ಬಣ್ಣಿಸಿದರು.
ಕೆನರಾ ಪಿಯು ಕಾಲೇಜು ಪ್ರಾಂಶುಪಾಲರಾದ ಲತಾ ಮಹೇಶ್ವರಿ ಮಾತನಾಡಿ, ಸಂಸ್ಥೆಗೆ ಅಭಿಮಾನ ತರುವ ಕೆಲಸವನ್ನು ಉಪನ್ಯಾಸಕ, ಸಾಹಿತಿ ರಘು ಇಡ್ಕಿದು ಮಾಡುತ್ತಿದ್ದಾರೆ. ಅವರಿಂದ ಇನ್ನಷ್ಟು ಕೃತಿಗಳು ಹೊರಬರಲಿ, ಶತಕದ ಗಡಿ ದಾಟಲಿ ಎಂದು ಹಾರೈಸಿದರು.
ಕೃತಿ ಕುರಿತು ಮಾತನಾಡಿದ ಸುರತ್ಕಲ್ ಗೋವಿಂದದಾಸ್ ಕಾಲೇಜು ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ, ತುಳುವಿನ ಜಾನಪದ ಪರಂಪರೆ ವಿಶಿಷ್ಟವಾಗಿದೆ. ಅದನ್ನು ಸಮರ್ಥವಾಗಿ ಕಟ್ಟಿಕೊಟ್ಟಲ್ಲಿ ತುಳು ಭಾಷೆಗೆ ಗಟ್ಟಿ ನೆಲೆ ಪ್ರಾಪ್ತವಾಗಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸಾಹಿತಿಗಳು ಮುಂದಡಿಯಿಡಬೇಕು ಎಂದರು.
‘ಅರಿಮುಡಿ’ ಕೃತಿಯಲ್ಲಿ ಕಯ್ಯರ ಕಿಂಞಣ್ಣ ರೈ ಅವರಿಂದ ತೊಡಗಿ ಇತ್ತೀಚಿನವರೆಗಿನ ಬರಹಗಾರರ 25 ಕೃತಿಗಳ ವಿಮರ್ಶೆ, ಅವಲೋಕನ, ಸಮೀಕ್ಷೆ ಇದೆ. ಕನ್ನಡದಲ್ಲಿ ಹಾಮಾ ನಾಯಕ ಅವರು ‘ಸಂಪುಟ, ಸಂಪದ, ಸಮೀಕ್ಷೆ…’ ಮೊದಲಾದ ವಿಮರ್ಶಾ ಕೃತಿಗಳನ್ನು ಪ್ರಕಟಿಸಿದ್ದರು. ಕೆಲವು ಪತ್ರಿಕೆ, ಪುರವಣಿಗಳೂ ಈ ಕಾರ್ಯವನ್ನು ಮಾಡುತ್ತಿದ್ದವು. ತುಳು ಸಾಹಿತ್ಯ ಪ್ರಕಾರಗಳ ಬಗ್ಗೆ ಈ ರೀತಿಯ ಪ್ರಯತ್ನ ಪ್ರಥಮ. ನಿರಂತರ ಕೃತಿ ಪ್ರಕಟಣೆ ಮೂಲಕ ಒಂದು ಸಂಸ್ಥೆ ಮಾಡುವ ಕೆಲಸವನ್ನು ರಘು ಇಡ್ಕಿದು ಮಾಡುತ್ತಿದ್ದಾರೆ ಎಂದರು.
ಕೃತಿಕಾರ ರಘು ಇಡ್ಕಿದು ಮಾತನಾಡಿ, ಪ್ರತಿಯೊಂದು ಕೃತಿ ಬಿಡುಗಡೆಯಾದಾಗಲೂ ಪ್ರಶಸ್ತಿ ಬಂದಷ್ಟೇ ಖುಷಿಯಾಗುತ್ತದೆ ಎಂದರು. ಪ್ರಕಾಶಕಿ ವಿದ್ಯಾ ಯು., ಕಸಾಪ ಮಂಗಳೂರು ತಾಲೂಕು ಗೌರವ ಕೋಶಾಧಿಕಾರಿ ಎನ್.ಸುಬ್ರಾಯ ಭಟ್, ಚುಸಾಪ ಮಂಗಳೂರು ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ ಮತ್ತಿತರಿದ್ದರು. ವಿನಮ್ರ ಇಡ್ಕಿದು ನಿರೂಪಿಸಿದರು.
ಪ್ರಸ್ತುತ ಬಹುತೇಕ ಸಾಹಿತ್ಯ ಕೃತಿಗಳು ಓದುಗರನ್ನು ತಲುಪುವಲ್ಲಿ ಸೋಲುತ್ತಿವೆ. ಸ್ಥಳೀಯ ಮಟ್ಟದಲ್ಲಿ ಪ್ರಚಾರ, ಬೆಂಬಲ ಅಗತ್ಯವಿದೆ. ಓದುಗರು ಪ್ರೋತ್ಸಾಹಿಸಿ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬೇಕು. ಸಾಹಿತ್ಯ ಕೃತಿಗಳ ಪ್ರಕಟಣೆ ತುಳು ಭಾಷೆಯ ಸ್ಥಾನಮಾನವನ್ನು ಉನ್ನತಿಗೇರಿಸಲು ನೆರವಾಗಲಿದೆ.
– ಪ್ರೊ.ಪಿ.ಕೃಷ್ಣಮೂರ್ತಿ, ಪ್ರಾಂಶುಪಾಲ, ಸುರತ್ಕಲ್ ಗೋವಿಂದದಾಸ್ ಕಾಲೇಜು