ಎದೆಹಾಲು ದಾನದ ಬಗ್ಗೆ ಮಾತಾಡಿದ ನಟಿ ರಾಧಿಕಾ ಪಂಡಿತ್ ವಿಡಿಯೋ ವೈರಲ್

Published on
ಸ್ಯಾಂಡಲ್​ವುಡ್​ನ ಗ್ಲಾಮರ್ಸ್ ನಟಿ ರಾಧಿಕಾ ಪಂಡಿತ್ ಅವರು ಕನ್ನಡ ಸಿನಿರಂಗದಲ್ಲಿ ಅವರ ಸಿನಿಮಾಗಳಿಗೆ ಅಲ್ಲದೇ ಹಲವು ಸಾಮಾಜಿಕ ಕಾರ್ಯಗಳ ಮೂಲಕವೂ ಸಿಕ್ಕಾಪಟ್ಟೆ ಗುರುತಿಸಿಕೊಂಡಿದ್ದಾರೆ. ಇನ್ನು, ಇದೀಗ ಸಿನಿಮಾಗಳಿಂದ ನಟಿ ರಾಧಿಕಾ ಬ್ರೇಕ್ ಪಡೆದರು ತಮ್ಮ ಸಮಾಜಮುಖಿ ಕೆಲಸಗಳನ್ನು ಮಾತ್ರ ಮುಂದುರಿಸುತ್ತಿದ್ದಾರೆ. ಸದ್ಯ, ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ‘ಎದೆಹಾಲು ದಾನ’ದ ಬಗ್ಗೆ ಒಂದು ವಿಡಿಯೋ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಹೌದು, ನಟಿ ರಾಧಿಕಾ ಅವರು ‘‘ಎಲ್ಲಾ ಮಕ್ಕಳ ಬೆಳವಣಿಗೆಗೆ ಎದೆಹಾಲು ಅತ್ಯಗತ್ಯ. ಆದರೆ ಹಲವು ಕಾರಣಗಳಿಂದ ಹಲವು ಶಿಶುಗಳು ಸ್ತನ್ಯಪಾನದಿಂದ ವಂಚಿತರಾಗುತ್ತಾರೆ. ಬದುಕಿನ ಅತ್ಯಂತ ಮಹತ್ವಪೂರ್ಣ ಉಡುಗೊರೆಗಳಲ್ಲಿ ಎದೆಹಾಲು ಒಂದು. ಹಾಗೆ, ಎದೆಹಾಲಿನಲ್ಲಿ ಇರುವ ಅಂಶಗಳನ್ನು ಯಾವುದಕ್ಕೂ ಹೋಲಿಸಲು ಆಗುವುದಿಲ್ಲ'' ಎಂದಿದ್ದಾರೆ ರಾಧಿಕಾ.
''ಎಳೆ ಮಕ್ಕಳಿಗೆ ಎದೆ ಹಾಲು ಬಹಳ ಮುಖ್ಯ. ಅದರಲ್ಲಿ ಸಿಗುವ ಪೋಷಕಾಂಶಗಳು ಅಥವಾ ರೋಗ ನಿರೋಧಕ ಗುಣವನ್ನು ನೀಡಲು ಮತ್ಯಾವುದಕ್ಕೂ ಸಾಧ್ಯವಿಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ತಾಯಂದಿರಲ್ಲಿ ಅಗತ್ಯವಾಗಿದ್ದಷ್ಟು ಹಾಲು ಉತ್ಪಾದನೆಯಾಗದೆ ಇರಬಹುದು. ಅಂತಹ ತಾಯಂದಿರ ಮಕ್ಕಳಿಗೆ ಸಹಾಯವಾಗುವ ದೃಷ್ಟಿಯಿಂದ ಎದೆಹಾಲು ಬ್ಯಾಂಕ್’ಗಳನ್ನು ಸ್ಥಾಪಿಸಲಾಗಿದೆ. ಇದು ಅಗತ್ಯವಿರುವವರಿಗೆ ಸಹಾಯವಾಗಲಿದೆ’’ ಎಂದು ತಿಳಿಸಿದ್ದಾರೆ. ಅಂದಹಾಗೆ, 'ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಅಭಿಯಾನದ ಬಗ್ಗೆ ಮಾತನಾಡಿರುವ ನಟಿಯ ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಹೆಚ್ಚು ಕಡಿಮೆ 3 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net