

Rachin Ravindra: ನಿನ್ನೆ (ಮಾ.10) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮ ಪಡೆ ಭರ್ಜರಿ ಜಯ ಸಾಧಿಸಿತು. ಈ ಮೂಲಕ 2025ರ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟಿತು. ರೋಹಿತ್ ನಾಯಕತ್ವದಲ್ಲಿ ಎರಡನೇ ಚಾಂಪಿಯನ್ಸ್ ಟ್ರೋಫಿ ಎತ್ತಿಹಿಡಿದ ಟೀಮ್ ಇಂಡಿಯಾ ಗೆಲುವು ಕಂಡ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಒಂದೆಡೆ ವಿಪರೀತ ಖುಷಿ, ಸಂಭ್ರಮ ಕಾಣಿಸಿದರೆ, ಮತ್ತೊಂದೆಡೆ ಕಿವೀಸ್ ಆಟಗಾರರ ಕಣ್ಣಂಚಲ್ಲಿ ಸೋಲಿನ ದುಃಖ ನೋಡುಗರನ್ನು ಭಾವುಕರನ್ನಾಗಿಸಿತು.
ಆರಂಭದಿಂದಲೂ ಭಾರೀ ಪೈಪೋಟಿ ನೀಡಿದ ನ್ಯೂಜಿಲೆಂಡ್, ತಾವು ನೀಡಿದ ಗುರಿಯನ್ನು ಬೆನ್ನಟ್ಟಿದ ಭಾರತವನ್ನು ನಿಯಂತ್ರಿಸಲು ಶತಾಯಗತಾಯ ಪ್ರಯತ್ನ ಮಾಡಿದ್ದೇ ಆದರೂ ಸಣ್ಣ ಅಂತರದಲ್ಲಿ ಸೋಲು ಅನುಭವಿಸಿತು. ಇದೊಂದು ಸೋಲಿನಿಂದ 2025ರ ಚಾಂಪಿಯನ್ಸ್ ಪಟ್ಟ ಅಲಂಕರಿಸುವ ಅವಕಾಶವನ್ನು ಕಳೆದುಕೊಂಡಿತು. ಇನ್ನು ಸೋಲಿನಿಂದ ತೀವ್ರ ಬೇಸರಗೊಂಡ ರಚಿನ್ ರವೀಂದ್ರ, 4 ವಿಕೆಟ್ಗಳ ಅಂತರದಲ್ಲಿ ತಮ್ಮ ತಂಡ ಸೋತಿದ್ದನ್ನು ಅರಗಿಸಿಕೊಳ್ಳಲು ಪರದಾಡಿದ್ದಾರೆ.
"ಇದೊಂದು ಅದ್ಭುತ ಫೈನಲ್ ಪಂದ್ಯವಾಗಿತ್ತು. ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ. ಪ್ರಶಸ್ತಿ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು. ಐಸಿಸಿ ಟೂರ್ನಮೆಂಟ್‌ಗಳಲ್ಲಿ ಆಡಿ, ಉತ್ತಮ ಪ್ರದರ್ಶನ ನೀಡುವುದನ್ನು ನಿಜಕ್ಕೂ ನಾನು ಆನಂದಿಸುತ್ತೇನೆ. ಕ್ರಿಕೆಟ್ ಕೆಲವೊಮ್ಮೆ ಕ್ರೂರ ಕ್ರೀಡೆ ಆಗಿಯೂ ಬದಲಾಗುತ್ತದೆ. ಈ ಬಾರಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ನಮ್ಮ ತಂಡದ ಎಲ್ಲಾ 15 ಸದಸ್ಯರು ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ರಚಿನ್ ಹೇಳಿದ್ದಾರೆ.
ದುಬೈ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತೀಯ ಸ್ಪಿನ್ನರ್‌ಗಳ ಕಡಿವಾಣದ ನಡುವೆ ಬ್ಯಾಟರ್ ಡೆರಿಲ್ ಮಿಚೆಲ್ (63 ರನ್, 101 ಎಸೆತ, 3 ಬೌಂಡರಿ) ಹಾಗೂ ಮಿಚೆಲ್ ಬ್ರೇಸ್‌ವೆಲ್ (53* ರನ್, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ 7 ವಿಕೆಟ್‌ಗೆ 251 ರನ್‌ಗಳ ಪೈಪೋಟಿಯುತ ಮೊತ್ತ ಕಲೆಹಾಕಿತು. ಪ್ರತಿಯಾಗಿ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ (31) ಒದಗಿಸಿದ ಬಿರುಸಿನ ಆರಂಭದ ನಡುವೆಯೂ 17 ರನ್‌ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆಗ ಶ್ರೇಯಸ್ ಅಯ್ಯರ್ (48 ರನ್, 62 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ (29) ಚೇಸಿಂಗ್ ಜೀವಂತವಿಟ್ಟರು. ಕೊನೆಯಲ್ಲಿ ಕನ್ನಡಿಗ ಕೆಎಲ್ ರಾಹುಲ್ (34* ರನ್, 33 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ 49 ಓವರ್‌ಗಳಲ್ಲಿ 6 ವಿಕೆಟ್‌ಗೆ 254 ಭಾರತಕ್ಕೆ ಗೆಲುವು ತಂದುಕೊಟ್ಟರು. ಕೊನೆಯವರೆಗೂ ಪಂದ್ಯದಲ್ಲಿ ಹೋರಾಡಿದ ನ್ಯೂಜಿಲೆಂಡ್ ರನ್ನರ್ ಅಪ್‌ಗೆ ಸಮಾಧಾನ ಕಂಡಿದೆ.
ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಭಾರತ ತಂಡ 2.24 ಮಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಬಹುಮಾನದ ಹಣವಾಗಿ ಪಡೆಯಲಿದೆ. ಇದು ಭಾರತೀಯ ಕರೆನ್ಸಿಯಲ್ಲಿ 19.52 ಕೋಟಿ ರೂಪಾಯಿ. ರನ್ನರ್ ಅಪ್ ತಂಡವು 1.12 ಮಿಲಿಯನ್ ಡಾಲರ್‌ಗಳನ್ನು ಪಡೆಯಲಿದೆ. ಇದು ಭಾರತೀಯ ಕರೆನ್ಸಿಯಲ್ಲಿ 9.76 ಕೋಟಿ ರೂಪಾಯಿ. ಸೆಮಿಫೈನಲ್‌ನಲ್ಲಿ ಸೋತ ಪ್ರತಿ ತಂಡವು 4.88 ಕೋಟಿ ರೂ. ಪಡೆಯಲಿದೆ. ಐದನೇ ಮತ್ತು ಆರನೇ ಸ್ಥಾನ ಪಡೆದ ತಂಡಗಳು ತಲಾ 3.05 ಕೋಟಿ ರೂ. ಮತ್ತು ಏಳನೇ ಮತ್ತು ಎಂಟನೇ ಸ್ಥಾನ ಪಡೆದ ತಂಡಗಳು 1.22 ಕೋಟಿ ರೂ. ಪಡೆಯಲಿವೆ. (ಏಜೆನ್ಸೀಸ್)