

ಉದಯಪುರ್: ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದ್ದಕ್ಕೆ ವಾಟ್ಸ್ಆ್ಯಪ್ ಮೂಲಕ ಸಂತಸ ವ್ಯಕ್ತಪಡಿಸಿದ ಮಹಿಳೆಗೆ ಭಾರೀ ಆಘಾತವಾಗಿದೆ.
ರಾಜಸ್ಥಾನದ ಉದಯಪುರದ ನೀರಜ್ ಮೋದಿ ಹೆಸರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಆಗಿದ್ದ ನಫೀಸಾ ಅಟ್ಟಾರಿ, ಪಾಕ್ ತಂಡ ಗೆದ್ದಿದ್ದಕ್ಕೆ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದರು. ಅದರಲ್ಲಿ ನಾವು ಗೆದ್ದೆವು ಎಂದು ಬರೆದುಕೊಂಡಿದ್ದರು. ಇದರು ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು, ಆಕೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.
ಅದಕ್ಕೂ ಮುನ್ನ ವಿದ್ಯಾರ್ಥಿಯ ಪಾಲಕರು ನೀವು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಹೌದು ಎಂದು ಉತ್ತರ ನೀಡಿದ್ದಳು. ಶಿಕ್ಷಕಿಯ ವಾಟ್ಸ್ಆ್ಯಪ್ ಸ್ಟೇಟಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಅದು ಶಾಲೆಯ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು, ತಕ್ಷಣ ಆಕೆಯನ್ನು ಶಾಲೆಯಿಂದಲೇ ಹೊರದಬ್ಬಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಭಾನುವಾರ (ಅ.24) ನಡೆದ ಪಂದ್ಯದಲ್ಲಿ ಟಾಸ್ ಸೋಲಿನಿಂದಲೇ ಹಿನ್ನಡೆ ಎದುರಿಸಿದ ಭಾರತ ತಂಡಕ್ಕೆ ಬಳಿಕ ಬೌಲಿಂಗ್ ವೇಳೆ ಇಬ್ಬನಿ ಸಮಸ್ಯೆ ಬಹುವಾಗಿ ಕಾಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಶಹೀನ್ ಷಾ ಅಫ್ರಿದಿ (31ಕ್ಕೆ 3) ಮಾರಕ ದಾಳಿಯಿಂದ ಆಘಾತ ನೀಡಿದರು. ನಾಯಕ ವಿರಾಟ್ ಕೊಹ್ಲಿ (57ರನ್, 49 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ರಿಷಭ್ ಪಂತ್ (39 ರನ್, 30 ಎಸೆತ, 2 ಬೌಂಡರಿ, 2 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನಿರ್ವಹಣೆ ನೆರವಿನಿಂದ ಭಾರತ ತಂಡ 7 ವಿಕೆಟ್ಗೆ 151 ರನ್ ಪೇರಿಸಿತು. ಪ್ರತಿಯಾಗಿ ಪಾಕ್ ತಂಡ, ಮೊಹಮದ್ ರಿಜ್ವಾನ್ (78*ರನ್, 55 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಬಾಬರ್ ಅಜಮ್ (68*ರನ್, 52 ಎಸೆತ, 6 ಬೌಂಡರಿ, 2 ಸಿಕ್ಸರ್) ಜೋಡಿಯ ವಿಕೆಟ್ 17.5 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ರನ್ಗಳಿಸಿ ಜಯದ ನಗೆ ಬೀರಿತು. (ಏಜೆನ್ಸೀಸ್)