ನಡುರಸ್ತೆಯಲ್ಲಿ ಬಡ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ ಮಹಿಳೆ: ವಿಡಿಯೋ ವೈರಲ್​

Auto Driver
Published on

ನೋಯ್ಡಾ: ಮಹಿಳೆಯೊಬ್ಬಳು ಆಟೋ ಚಾಲಕನೊಬ್ಬನ ಕುತ್ತಿಗೆ ಹಿಡಿದೆಳೆದು, ಕಪಾಳ ಮೋಕ್ಷ ಮಾಡಿ, ಕೂಗಾಡಿ, ನಿಂದಿಸಿ ರಂಪಾಟ ಮಾಡಿರುವ ವಿಡಿಯೋ ಒಮದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಘಟನೆ ಶನಿವಾರ ಬೆಳಗ್ಗೆ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್​ 110ರ ಎರಡನೇ ಹಂತದಲ್ಲಿರುವ ಮಾರುಕಟ್ಟೆ ಒಂದರಲ್ಲಿ ನಡೆದಿದೆ. ಆಟೋದ ಒಂದು ಭಾಗ ಕಾರಿಗೆ ಡಿಕ್ಕಿಯಾಗಿದ್ದರಿಂದ ತಾಳ್ಮೆ ಕಳೆದುಕೊಂಡ ಮಹಿಳೆ, ಆಟೋ ಚಾಲಕನ ಮೇಲೆ ತನ್ನ ಸಿಟ್ಟನೆಲ್ಲ ತೀರಿಸಿಕೊಂಡಿದ್ದಾಳೆ. ಅಲ್ಲದೆ, ಬಾಯಿಗೆ ಬಂದಂತೆ ನಿಂದಿಸಿದ್ದಾಳೆ. ಇದೇ ಸಂದರ್ಭದಲ್ಲಿ ದಾರಿಹೋಕರು ಗಲಾಟೆಯನ್ನು ನೋಡಿದರೂ ಯಾರೊಬ್ಬರು ಮಧ್ಯಪ್ರವೇಶಿಸಿ ಬಿಡಿಸುವ ಗೋಜಿಗೆ ಹೋಗಲಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ನೋಯ್ಡಾ ಪೊಲೀಸರನ್ನು ಒತ್ತಾಯಿಸುತ್ತಿದ್ದಾರೆ. ಸಂತ್ರಸ್ತ ಆಟೋ ಚಾಲಕ ಮಿಥುನ್​ ದೂರು ನೀಡಿದ ಬೆನ್ನಲ್ಲೇ ಶ್ರಮಿಕ್​ ಕುಂಜ್​ ನಿವಾಸಿಯಾಗಿರುವ ಆರೋಪಿ ಕಿರಣ ಸಿಂಗ್​ರನ್ನು ಬಂಧಿಸಲಾಗಿದೆ.

ಟ್ವೀಟ್ ಮೂಲಕ ಮಾಹಿತಿ ನೀಡಿರುವ ನೋಯ್ಡಾ ಪೊಲೀಸರು, ಈ ಪ್ರಕರಣದಲ್ಲಿ ಆಟೋ ಚಾಲಕನ ದೂರಿನ ಮೇರೆಗೆ ಮಹಿಳೆಯನ್ನು ಬಂಧಿಸಿದ್ದೇವೆ ಮತ್ತು ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net