3 ವರ್ಷದ ಹೆಣ್ಣು ಮಗುವಿನ ಕೊಲೆ ಪ್ರಕರಣ ಬೆನ್ನತ್ತಿ ಹೋದ ಪೊಲೀಸರಿಂದ ಸ್ಫೋಟಕ ರಹಸ್ಯ ಬಯಲು!

AP Man
Published on

ವಿಶಾಖಪಟ್ಟಣಂ: ವೈಜಾಗ್​ ನಗರದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ಮೂರು ವರ್ಷದ ಮಗುವಿನ ಬರ್ಬರ ಹತ್ಯೆ ಪ್ರಕರಣವನ್ನು ವಿಶಾಖಪಟ್ಟಣಂ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಮಗುವಿನ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಜಗದೀಶ್​​ ಎಂಬಾತನೇ ಮಗುವನ್ನು ಕೊಲೆ ಮಾಡಿದ್ದಾನೆಂದು ತಿಳಿಸಿದ್ದಾರೆ.

ವಿವರಣೆಗೆ ಬರುವುದಾದರೆ, ಐದು ವರ್ಷಗಳ ಹಿಂದೆ ಮದುವೆಯಾದ ರಮೇಶ್​ ಮತ್ತು ವರಲಕ್ಷ್ಮಿಗೆ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಸಿಂಧು ಹೆಸರಿನ 3 ವರ್ಷದ ಹೆಣ್ಣು ಮಗುವಿತ್ತು. ರಮೇಶ್​ ಮೇಸನ್​ ಆಗಿ ಕೆಲಸ ಮಾಡುತ್ತಿದ್ದ. ವರಲಕ್ಷ್ಮೀ ಕೋಸ್ಟಲ್​ ಫುಡ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇದೇ ವೇಳೆ ವರಲಕ್ಷ್ಮೀಗೆ ಜಗದೀಶ್​ ರೆಡ್ಡಿ ಎಂಬಾತನ ಪರಿಚಯವಾಗಿ, ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು.

ಜಗದೀಶ್​ಗೂ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದವು. ಮಾರ್ಚ್​ 14ರಂದು ವರಲಕ್ಷ್ಮೀ ಮನೆ ಬಿಟ್ಟು ಜಗದೀಶ್​ನೊಂದಿಗೆ ತೆರಳಿ ಕೆಲವು ದಿನಗಳ ನಂತರ ಹಿಂದಿರುಗಿದ್ದರು. ಪತ್ನಿಯ ಕಳ್ಳಾಟ ರಮೇಶ್​ಗೂ ತಿಳಿದಿತ್ತು. ಈ ಬಗ್ಗೆ ಆಕೆ ಎಚ್ಚರಿಕೆಯನ್ನು ಸಹ ನೀಡಿದ್ದನು. ಆದರೂ, ಇಬ್ಬರ ಸರಸ ಸಲ್ಲಾಪ ರಹಸ್ಯವಾಗಿಯೇ ಮುಂದುವರಿದಿತ್ತು. ಹೀಗಿರುವಾಗ ಮೇ 14ರಂದು ವರಲಕ್ಷ್ಮೀ ಮತ್ತು ಜಗದೀಶ್​ ಮಗಳು ಸಿಂಧು ಕರೆದುಕೊಂಡು ಹೋದರು.

ನಾಲ್ಕು ದಿನಗಳ ಬಳಿಕ ಪತಿಗೆ ಫೋನಾಯಿಸಿದ ವರಲಕ್ಷ್ಮೀ ಮಗಳು ಮೃತಪಟ್ಟಿರುವುದಾಗಿ ಹೇಳಿದಳು. ಬಳಿಕ ಅನುಮಾನ ಬಂದ ರಮೇಶ್​ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದ. ಬಳಿಕ ಪೊಲೀಸರು ವರಲಕ್ಷ್ಮೀ ಮತ್ತು ಜಗದೀಶ್​ನನ್ನು ಬಂಧಿಸಿದರು. ಮೂರು ದಿನಗಳ ಹಿಂದೆಯೇ ಮಗುವನ್ನು ಕೊಂದು ಸಮಾಧಿ ಮಾಡಿರುವುದಾಗಿ ಪೊಲೀಸರಿಗೆ ತಿಳಿಯಿತು. ಮಗುವಿನ ಸಮಾಧಿ ಸ್ಥಳಕ್ಕೆ ತೆರಳಿ ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಇನ್ನು ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿರುವ ಜಗದೀಶ್​, ತನ್ನ ಅನೈತಿಕ ಸಂಬಂಧಕ್ಕೆ ಮಗು ಅಡ್ಡವಾಗಿದ್ದಕ್ಕೆ ಕೋಪಗೊಂಡು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಮಗುವಿಗೆ ರಾಕ್ಷಸನಂತೆ ಚೆನ್ನಾಗಿ ಥಳಿಸಿ ಕೊಂಡಿದ್ದಾನೆ. ತನ್ನ ಮಗು ಮೃತಪಟ್ಟರು ವರಲಕ್ಷ್ಮೀ ಶಾಂತವಾಗಿರುವುದು ಚರ್ಚೆಗೆ ಕಾರಣವಾಗಿದ್ದು, ಕೊಲೆಗೆ ವರಲಕ್ಷ್ಮಿಯು ಸಹಕಾರ ನೀಡಿರಬಹುದು ಎಂಬ ಸಂಶಯ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net