

ಚೆನ್ನೈ: ಕಾಲಿವುಡ್ ಸೂಪರ್ಸ್ಟಾರ್ ವಿಜಯ್ ಅವರ ಮುಂದಿನ ಚಿತ್ರ ಬೀಸ್ಟ್ ಏಪ್ರಿಲ್ 13ಕ್ಕೆ ದೇಶಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೆ, ಬಿಡುಗಡೆಗೂ ಮುನ್ನವೇ ಬೀಸ್ಟ್ ಚಿತ್ರ ವಿವಾದದ ಸುಳಿಗೆ ಸಿಲುಕಿಕೊಂಡಿದೆ.
ಈಗಾಗಲೇ ಬೀಸ್ಟ್ ಚಿತ್ರಕ್ಕೆ ಕುವೈತ್ ನಿಷೇಧ ಹೇರಿದೆ. ಚಿತ್ರದಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯ ದೃಶ್ಯಗಳನ್ನು ತೋರಿಸಲಾಗಿದೆ, ಇದು ಕುವೈತ್ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಈ ಚಿತ್ರವನ್ನು ನಿಷೇಧಿಸಲು ನಿರ್ಧರಿಸಿದೆ. ಇದರಿಂದ ಚಿತ್ರತಂಡದ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ.
ಇದರ ಬೆನ್ನಲ್ಲೇ ತಮಿಳುನಾಡಿನಲ್ಲೂ ಚಿತ್ರವನ್ನು ಬ್ಯಾನ್ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ತಮಿಳುನಾಡಿನ ಮುಸ್ಲಿಂ ಲೀಗ್ ಅಧ್ಯಕ್ಷ ಮುಸ್ತಾಫ ಬೀಸ್ಟ್ ಸಿನಿಮಾ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ. ರಾಜ್ಯದ ಗೃಹ ಇಲಾಖೆಗೆ ಮುಸ್ತಾಫ ಪತ್ರ ಬರೆದು ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.
ಚಿತ್ರದ ಕಥೆಯ ಕುರಿತು ಮಾತನಾಡುವುದಾದರೆ, ನಟ ವಿಜಯ್ ಬೀಸ್ಟ್ನಲ್ಲಿ ವಿಜಯವೀರ ರಾಘವನ್ ಎಂಬ ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದು, ಅನಿರುದ್ಧ ರವಿಚಂದರ್ ಸಂಗೀತ ನೀಡಿದ್ದಾರೆ. ವಿಜಯ್ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಸಾಥ್ ನೀಡಿದ್ದಾರೆ. ಕಲಾನಿಧಿ ಮಾರನ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. (ಏಜೆನ್ಸೀಸ್)