ಪ್ರೀತಿಸಿ ಮದ್ವೆಯಾದ ಪತ್ನಿಯನ್ನೇ ಕೊಂದನಾ ಪತಿ? ಆರೋಪ-ಪ್ರತ್ಯಾರೋಪಗಳ ಮಧ್ಯೆ ಅನಾಥವಾದ ಕಂದಮ್ಮ

Vijayanagara Couple
Published on

ವಿಜಯನಗರ: ಎರಡು ವರ್ಷಗಳ‌ ಕಾಲ ಪ್ರೀತಿಸಿ ಮದುವೆಯಾದ ಪತ್ನಿಯನ್ನೆ ಕೊಲೆ ಮಾಡಿರುವ ಆರೋಪ ಪತಿಯ ವಿರುದ್ಧ ಕೇಳಿಬಂದಿದ್ದು, ಮೃತ ಯುವತಿಯ ಕುಟುಂಬಸ್ಥರು ಯುವಕನ ಮನೆಗೆ ನುಗ್ಗಿ ಗಲಾಟೆ ಮಾಡಿ, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ಘಟನೆ ಕೂಡ್ಲಿಗಿ ತಾಲೂಕಿನ ಬಣವಿಕಲ್ ಗ್ರಾಮದಲ್ಲಿ ನಡೆದಿದೆ. ಯುವತಿಯ ಸಾವಿನಿಂದ ರೊಚ್ಚಿಗೆದ್ದು, ಯುವಕನ ಮನೆಗೆ ನುಗ್ಗಿದ ಯುವತಿಯ ಸಂಬಂಧಿಕರು ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಗಲಾಟೆ ಮಾಡಿದ್ದಾರೆ.

ಚಿತ್ರದುರ್ಗದ ಮಲ್ಲಾಪುರದ ಹೀನಾಬಾನು (23) ಮೃತ ಯುವತಿ. ಈಕೆ 2 ವರ್ಷಗಳ ಹಿಂದೆ ಜಾಫರ್​ ಸಾಧಿಕ್​ನನ್ನು ಪ್ರೀತಿಸಿ ಮದುವೆಯಾಗಿದ್ದಳು. 7 ತಿಂಗಳ ಹಿಂದೆಯಷ್ಟೇ ಹೀನಾಬಾನು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಇದೀಗ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆಕೆಯ ಕುಟುಂಬ ಕೊಲೆ ಆರೋಪ‌ ಮಾಡಿದೆ.

ಆರೋಪ ಬೆನ್ನಲ್ಲೇ ಹೀನಾಬಾನು ಪತಿ ಜಾಫರ್ ಸಾಧೀಕ್, ಮಾವ ರಾಜಾಸಾಬ್, ಬಾವ ದಾದಾಫೀರ್ ಹಾಗೂ ನಾದಿನಿ ಹೀನಾಳನ್ನು ವಿಜಯನಗರದ ಕಾನಾಹೊಸಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆರೋಪ ನಿರಾಕರಿಸಿರುವ ಗಂಡನ ಮನೆಯವರು, ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ವೈಮನಸ್ಸಿತ್ತು. ಗಂಡನ ಪೋನ್ ರಿಸೀವ್ ಮಾಡದಿದ್ದಕ್ಕೆ ಮತ್ತು ಊಟದ ವಿಚಾರದಲ್ಲಿ ಗಂಡ-ಹೆಂಡತಿ ಮಧ್ಯೆ ಮನಸ್ತಾಪವಿತ್ತು. ಗಂಡನ ಜತೆ ಹೀನಾಬಾನು ಮುನಿಸಿಕೊಂಡಿದ್ದಳು. ಇದರಿಂದ ಮನನೊಂದು ಹೀನಾಬಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದು ಗಂಡನ ಮನೆಯವರ ವಾದವಾಗಿದೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕಾನಾಹೊಸಹಳ್ಳಿ ಠಾಣಾ ಪೊಲೀಸರು, ತನಿಖೆಯನ್ನು ಆರಂಭಿಸಿದ್ದಾರೆ. ಆರೋಪ ಮತ್ತು ಪ್ರತ್ಯಾರೋಪಗಳ ನಡುವೆ 7 ತಿಂಗಳ ಮಗು ಅನಾಥವಾಗಿದ್ದು, ವಿಧಿಯ ಕ್ರೂರತೆಗೆ ಈ ಘಟನೆ ಸಾಕ್ಷಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net