

ಹೈದರಾಬಾದ್: ಬಾಲಿವುಡ್ನ ಟಾಪ್ ಸಿನಿಮಾ ವಿಮರ್ಶಕರೊಬ್ಬರು ಹಿಂದಿ ಸಿನಿಮಾ ಮಾರುಕಟ್ಟೆಯ ಮೇಲೆ ತನ್ನ ಪ್ರಭಾವವನ್ನು ಹೊಂದಿದ್ದು, ಫ್ಲಾಪ್ ಸಿನಿಮಾಗಳನ್ನು ಕೂಡ ಯಶಸ್ಸಿ ಚಿತ್ರವೆಂದು ಎಲ್ಲರು ನಂಬುವಂತೆ ಮಾಡುವ ತಂತ್ರಗಾರಿಕೆ ಬಳಸುತ್ತಿರುವ ಸಂಗತಿಯೊಂದು ಇದೀಗ ಮುನ್ನೆಲೆಗೆ ಬಂದಿದೆ.
ಸಾಮಾನ್ಯವಾಗಿ ಸಿನಿಮಾ ಪ್ರೇಕ್ಷಕರು ಸಾರ್ವಜನಿಕರ ಅಭಿಪ್ರಾಯದ ಮೇಲೆ ಅವಲಂಬಿತರಾಗಿರುತ್ತಾರೆ ಅಥವಾ ಇತರೆ ವಿಮರ್ಶಕರ ಅಭಿಪ್ರಾಯವನ್ನು ಸಹ ಗಮನಿಸುತ್ತಾರೆ. ಆದರೆ, ಬಾಲಿವುಡ್ನ ಈ ನಿರ್ದಿಷ್ಟ ವ್ಯಕ್ತಿಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅನುಯಾಯಿಗಳಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವಂತೆ ತೋರುತ್ತಿದೆ.
ಇತ್ತೀಚಿನ ದಿನಗಳಲ್ಲಿ ಈ ಟಾಪ್ ವಿಮರ್ಶಕ ಅನೇಕ ತೆಲುಗು ಹಾಗೂ ಕನ್ನಡ ಚಲನಚಿತ್ರಗಳ ಮೇಲೆ ‘ಪಾಸಿಟಿವ್’ ಟ್ವೀಟ್‌ಗಳನ್ನು ಹಾಕುತ್ತಿದ್ದು, ಆ ಟ್ವೀಟ್ಗಳು ದೊಡ್ಡ ಪ್ರಚಾರ ಪಡೆದುಕೊಳ್ಳುತ್ತಿದೆ. ಸಿನಿಮಾ ಗಲ್ಲಾಪೆಟ್ಟಿಗೆಯ ಅಂಕಿ-ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮತ್ತು ಕೆಲವು ಸೊಗಸಾದ ವಿಮರ್ಶೆಗಳನ್ನು ನೀಡಲು ಈ ವಿಮರ್ಶಕ ಹೆಸರುವಾಸಿಯಾಗಿದ್ದರೂ, ತನ್ನ ಸಕಾರಾತ್ಮಕ ಟ್ವೀಟ್‌ಗಳಿಗೆ ಪ್ಯಾಕೇಜ್ ಮಟ್ಟದಲ್ಲಿ ಚಿತ್ರತಂಡದ ಜತೆಗೆ ಡೀಲ್ ಮಾಡಿಕೊಂಡಿರುತ್ತಾರೆ ಎಂಬುದು ತಿಳಿದುಬಂದಿದೆ.
ಚಿತ್ರದ ಕುರಿತು ಸಕಾರಾತ್ಮಕ ವಿಮರ್ಶೆ ಹಾಗೂ ಇತರೆ ಕಾಮೆಂಟ್‌ಗಳು ಸೇರಿದಂತೆ ಒಂದಷ್ಟು ಟ್ವೀಟ್‌ಗಳಿಗಾಗಿ ತೆಲುಗು ಚಿತ್ರರಂಗದ ಸ್ಟಾರ್‌ಗಳು ಈ ವಿಮರ್ಶಕನಿಗೆ ಸುಮಾರು 10 ಲಕ್ಷ ರೂಪಾಯಿಗಳನ್ನು ಪ್ಯಾಕೇಜ್‌ನಂತೆ ಪಾವತಿಸುತ್ತಿದ್ದಾರೆ ಎಂಬ ವಿಚಾರ ಬಹಳ ಚರ್ಚೆಯಾಗುತ್ತಿದೆ. ಇದಲ್ಲದೆ, ಸಣ್ಣ ಸಣ್ಣ ತೆಲುಗು ಹೀರೋಗಳಿಗೆ ಅವರ ಪ್ರಾಜೆಕ್ಟ್ ಬಗ್ಗೆ ಒಳ್ಳೆಯ ವಿಮರ್ಶೆಗಳನ್ನು ನೀಡಲು 50 ಸಾವಿರದಿಂದ 1 ಲಕ್ಷ ರೂ.ವರೆಗೆ ಚಾರ್ಜ್ ಮಾಡುತ್ತಾರೆಂದು ತಿಳಿದುಬಂದಿದೆ.
ಟಾಲಿವುಡ್ ಕೂಡ ತಮ್ಮ ವ್ಯವಹಾರವನ್ನು ಹಿಂದಿ ಬೆಲ್ಟ್ಗೆ ವಿಸ್ತರಿಸಲು ಗಮನಹರಿಸುತ್ತಿರುವುದರಿಂದ ಪ್ರತಿ ಬಾರಿಯೂ ಈ ವಿಮರ್ಶಕರನ್ನು ಆಯಾ ಚಿತ್ರತಂಡಗಳು ಖರೀದಿಸುತ್ತಿದ್ದಾರೆ. ಸಿನಿಮಾ ಬಗ್ಗೆ ಒಳ್ಳೆಯ ಟ್ವೀಟ್ ಮಾಡುವುದೇ ಈ ವಿಮರ್ಶಕ ಕೆಲಸವಾಗಿದೆ. ಆ ವಿಮರ್ಶಕ ಯಾರೆಂಬುದನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಆದರೆ, ಈ ವಿಮರ್ಶಕನ ಆದಾಯ ಇದೀಗ ಮಧ್ಯಮ ಶ್ರೇಣಿಯ ತೆಲುಗು ನಾಯಕ ವರ್ಷಕ್ಕೆ ಗಳಿಸುವ ಆದಾಯಕ್ಕಿಂತ ಹೆಚ್ಚಾಗಿದೆಯಂತೆ. (ಏಜೆನ್ಸೀಸ್)