

ಬೆಂಗಳೂರು: ರಾಜ್ಯ ಸರ್ಕಾರದ ಕ್ರಮಗಳಿಂದ ರಾಜ್ಯದಲ್ಲಿ ಕರೊನಾ ವೈರಸ್ ಪ್ರಕರಣಗಳು ಸಂಪೂರ್ಣ ಕಡಿಮೆ ಆಗಿವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸರ್ಕಾರದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಸೋಮವಾರ (ಫೆ. 14) ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾತನಾಡಿದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಜ್ಯಪಾಲರು ಅಧಿವೇಶನಕ್ಕೆ ಹಾಜರಾದ ಎಲ್ಲರಿಗೂ ಸ್ವಾಗತ ಕೋರಿದರು.
ಕರೊನಾ ಪರಿಸ್ಥಿತಿ ಬಗ್ಗೆ ಮಾತನಾಡಿದ ರಾಜ್ಯಪಾಲರು ರಾಜ್ಯ ಸರ್ಕಾರವು ಯಶಸ್ವಿಯಾಗಿ ಕರೊನಾ ಪರಿಸ್ಥಿತಿಯನ್ನು ನಿರ್ವಹಣೆ ಮಾಡಿದೆ. ಎಲ್ಲರಿಗೂ ಕರೊನಾ ಲಸಿಕೆ ವಿತರಣೆ ಮಾಡಲಾಗಿದೆ. ಕರೊನಾ ಪರಿಸ್ಥಿತಿಯಲ್ಲೂ ಸಾಕಷ್ಟು ಕೆಲಸಗಳು ಆಗಿವೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಕ್ರಮಗಳಿಂದ ರಾಜ್ಯದಲ್ಲಿ ಕರೊನಾ ಕಡಿಮೆಯಾಗಿದೆ. ಸಾವಿನ ಪ್ರಮಾಣ ಕಡಿಮೆ ಮಾಡುವಲ್ಲಿಯೂ ಸರ್ಕಾರ ಯಶಸ್ವಿಯಾಗಿದೆ. ಇನ್ನೊಂದೆಡೆ ಕರೊನಾ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಶೇ. 100 ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಕರೊನಾ ಪಾಸಿಟಿವ್ ರಿಪೋರ್ಟ್ ಪಡೆದು ಬಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿದೆ. ಹೋಮ್ ಐಸೋಲೇಷನ್ನಲ್ಲಿರುವವರಿಗೆ ವೈದ್ಯರ ಸಲಹೆ ಸೂಕ್ತವಾದ ಸಮಯದಲ್ಲಿ ದೊರೆಯುತ್ತಿದೆ ಎನ್ನುವ ಮೂಲಕ ರಾಜ್ಯ ಸರ್ಕಾರ ಕಾರ್ಯವೈಖರಿಯನ್ನು ಕೊಂಡಾಡಿದರು.
ಕಪ್ಪುಪಟ್ಟಿ ಧರಿಸಿ ಬಂದ ಕಾಂಗ್ರೆಸ್ಸಿಗರು
ಜಂಟಿ ಅಧಿವೇಶನಕ್ಕೆ ಹಾಜರಾಗಿರುವ ಕಾಂಗ್ರೆಸ್ ನಾಯಕರುಗಳು ಕಪ್ಪು ಪಟ್ಟಿ ಧರಿಸಿ ಬಂದಿದ್ದು, ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹಿಜಾಬ್-ಕೇಸರಿ ಶಾಲು ವಿವಾದವನ್ನು ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಅಧಿವೇಶನಕ್ಕೆ ಕಾಂಗ್ರೆಸ್ ನಾಯಕರು ಹಾಜರಾಗಿದ್ದಾರೆ.
ಹಿಜಾಬ್ ಧರಿಸಿ ಬಂದ ಕಾಂಗ್ರೆಸ್ ನಾಯಕಿ
ಕಾಂಗ್ರೆಸ್ ನಾಯಕಿ ಖನೀಜ್ ಫಾತಿಮಾ ಅವರು ಹಿಜಾಬ್ ಧರಿಸಿಯೇ ಕಲಾಪಕ್ಕೆ ಆಗಮಿಸಿ ಗಮನ ಸೆಳೆದರು. ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಕಲಾಪಕ್ಕೆ ಹಿಜಾಬ್ ಧರಿಸಿ ಬರುವುದಾಗಿ ಈ ಹಿಂದೆಯೇ ಫಾತಿಮಾ ಅವರು ಹೇಳಿದ್ದರು. ಅದರಂತೆ ಇಂದು ಕಲಾಪಕ್ಕೆ ಹಾಜರಾಗಿದ್ದಾರೆ. ಆದರೆ, ಹಿಜಾಬ್ ಬ್ಯಾನ್ ಶಾಲೆ-ಕಾಲೇಜುಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಕಲಾಪಕ್ಕೆ ಧರಿಸಿ ಬಂದಿರುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ.