ಟ್ವಿಟರ್​ ಬಳಸಿದ ಸೌದಿ ಅರೇಬಿಯಾ ಮಹಿಳೆಗೆ 34 ವರ್ಷ ಜೈಲು ಶಿಕ್ಷೆ: ಅಷ್ಟಕ್ಕೂ ಆಕೆ ಮಾಡಿದ ಟ್ವೀಟ್​ ಯಾವುದು?

Salma
Published on

ರಿಯಾದ್​: ಟ್ವಿಟರ್​ ಬಳಕೆ ಮಾಡಿದ್ದಕ್ಕೆ ಸೌದಿ ಅರೇಬಿಯಾದ ವಿದ್ಯಾರ್ಥಿನಿಯೊಬ್ಬಳು 34 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ. ಟ್ವಿಟರ್​​ನಲ್ಲಿ ಕಾರ್ಯಕರ್ತರ ಮತ್ತು ಭಿನ್ನಮತೀಯರ ಟ್ವೀಟ್​ಗಳನ್ನು ರೀಟ್ವೀಟ್​ ಮಾಡಿದ್ದಕ್ಕಾಗಿ ವಿದ್ಯಾರ್ಥಿನಿ ಈ ಶಿಕ್ಷೆಗೆ ಒಳಗಾಗಿದ್ದಾಳೆ ಎಂದು ಗ್ಲೋಬಲ್​ ಮೀಡಿಯಾ ವರದಿ ಮಾಡಿದೆ.

ಸಲ್ಮಾ ಅಲ್ ಶೆಹಾಬ್ ಶಿಕ್ಷೆಗೆ ಗುರಿಯಾದ ವಿದ್ಯಾರ್ಥಿನಿ. ಈಕೆ ಲೀಡ್ಸ್​ ಯೂನಿವರ್ಸಿಟಿಯಲ್ಲಿ ಪಿಎಚ್​ಡಿ ಮಾಡುತ್ತಿದ್ದಳು. ಬ್ರಿಟನ್​ನಲ್ಲಿ ನೆಲೆಸಿದ್ದ ಸಲ್ಮಾ, ಟ್ವಿಟರ್​ ಖಾತೆಯನ್ನು ಹೊಂದಿದ್ದಳು. ಮಹಿಳಾ ಹಕ್ಕುಗಳ ಪರವಾಗಿ ಅನೇಕ ಟ್ವೀಟ್​ಗಳನ್ನು ಮಾಡಿದ್ದಳು. ಅಲ್ಲದೆ, ಭಿನ್ನಮತೀಯರ ಟ್ವೀಟ್​ಗಳನ್ನು ರೀಟ್ವೀಟ್​ ಮಾಡಿದ್ದಕ್ಕೆ ಆಕೆಯ ವಿರುದ್ಧ ಸೌದಿ ಅರೇಬಿಯಾ ಸರ್ಕಾರ ಗರಂ ಆಗಿದೆ. ಸ್ಥಳೀಯ ಭಯೋತ್ಪಾದನಾ ಕೋರ್ಟ್​ ತನಿಖೆ ನಡೆಸಿ, ಆಕೆಗೆ 34 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಆರೋಪಿ ಸಲ್ಮಾ, ಟ್ವೀಟ್​ ಮೂಲಕ ದೇಶವನ್ನು ಅಸ್ಥಿರಗೊಳಿಸುವ ಪಯತ್ನ, ಸಾರ್ವಜನಿಕರ ಜೀವನಕ್ಕೆ ತೊ೦ದರೆ, ರಾಷ್ಟ್ರೀಯ ಭದ್ರತಾ ಉಲ್ಲಂಘನೆ ಮತ್ತು ಟ್ವೀಟ್​ ಮೂಲಕ ಸುಳ್ಳು ಮಾಹಿತಿಗಳನ್ನು ಹರಡಿರುವ ಆರೋಪವನ್ನು ಕೋರ್ಟ್​ ಮಾಡಿದೆ. ಈ ಅಪರಾಧಕ್ಕಾಗಿ ಆಕೆಗೆ 34 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಕಳೆದ ವರ್ಷದ ಕೊನೆಯಲ್ಲಿ ಸಲ್ಮಾಗೆ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಆದರೆ, ಇತ್ತೀಚೆಗೆ ಈ ಶಿಕ್ಷೆಯನ್ನು 34 ವರ್ಷಕ್ಕೆ ಹೆಚ್ಚಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ ಆಕೆ ಬ್ರಿಟನ್​ನಿಂದ ತವರಿಗೆ ಬಂದಾಗ ಆಕೆಯನ್ನು ಬಂಧಿಸಲಾಗಿದೆ.

ಶೆಹಬ್ ಕೆಲವು ಸಮಯದಿಂದ ಮಹಿಳೆಯರ ಹಕ್ಕುಗಳಿಗಾಗಿ ಆಂದೋಲನ ನಡೆಸುತ್ತಿದ್ದರು. ಆಕೆಯ ಸಹೋದರಿ ಕೂಡ ಕಾರ್ಯಕರ್ತೆಯಾಗಿದ್ದಾರೆ. ಆಕೆಯು ಕೂಡ ಸಾವಿರಕ್ಕೂ ಹೆಚ್ಚು ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾಳೆ. ಇತ್ತೀಚಿನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಲ್ಮಾಗೆ ಒಂದು ತಿಂಗಳ ಅವಕಾಶವಿದೆ. ಸಲ್ಮಾ ಅವರಿಗೆ ಪತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಈ ಘಟನೆ ಸೌದಿ ಅರೇಬಿಯಾದಲ್ಲಿ ಶಿಕ್ಷೆಯ ಕಠಿಣತೆಗೆ ಮತ್ತೊಂದು ಉದಾಹರಣೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net