

ನವದೆಹಲಿ: ಶಿವಸೇನಾ, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮೈತ್ರಿಯ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡೆದ್ದಿರುವ ಶಿವಸೇನಾ ನಾಯಕ ಏಕನಾಥ್ ಶಿಂಧೆ ಹೊಸ ಬಾಂಬ್ ಸಿಡಿಸಿದ್ದಾರೆ. ಇದುವರೆಗೂ ಶಿಂಧೆ ಬಣದಲ್ಲಿ 40 ಶಾಸಕರಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಶಿಂಧೆ ಅಚ್ಚರಿಯ ಹೇಳಿಕೆ ನೀಡಿದ್ದು, ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿದೆ.
ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಿಂಧೆ, ನನ್ನ ಬಳಿ 40 ಅಲ್ಲ 50 ಶಾಸಕರಿದ್ದಾರೆ ಎಂದಿದ್ದಾರೆ. ಶಿವಸೇನಾ ಪಕ್ಷದ 40 ಮತ್ತು ಇತರೆ 10 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎನ್ನುವ ಮೂಲಕ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧ ಹೊಸ ದಾಳ ಉರುಳಿಸಿದ್ದಾರೆ.
ಸದ್ಯ ಎಲ್ಲ ಶಾಸಕರೊಂದಿಗೆ ಶಿಂಧೆ ಅಸ್ಸಾಂ ರಾಜಧಾನಿ ಗುವಾಹಟಿಯ ಹೋಟೆಲ್ ಒಂದರಲ್ಲಿ ಬಿಡಾರ ಹೂಡಿದ್ದಾರೆ. ನಮ್ಮ ಪಾತ್ರದಲ್ಲಿ ನಂಬಿಕೆ ಇರುವವರು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ನಾವು ಬಾಳಾ ಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಮುನ್ನಡೆಸಿಕೊಂಡು ಹೋಗಬೇಕೆಂದುಕೊಂಡಿದ್ದೇವೆ. ಇದು ಯಾರಿಗೆ ಇಷ್ಟ ಇದೆಯೋ ಅವರು ನಮ್ಮ ಜೊತೆ ಬಂದು ಸೇರಬಹುದು ಎಂದು ಶಿಂಧೆ ಮುಕ್ತ ಆಹ್ವಾನವನ್ನು ನೀಡಿದರು. ಅಲ್ಲದೆ, ಈಗ ಬಂಡೆದ್ದಿರುವ ಶಾಸಕರು ಬಾಳಾ ಸಾಹೇಬ್ ಠಾಕ್ರೆ ಅವರ ಶಿವಸೇನಾವನ್ನು ಬಿಡುವುದಿಲ್ಲ ಎಂದು ತಿಳಿಸಿದರು.
ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ನೋಟಿಸ್ ಸಲ್ಲಿಸಲು ಮುಂದಾಗಿರುವ ಶಿವಸೇನೆಯ ಕ್ರಮವು "ಕಾನೂನುಬಾಹಿರ" ಎಂದು ಶಿಂಧೆ ಜರಿದರು. ನಿನ್ನೆ ಶಿವಸೇನಾ ತೆಗೆದುಕೊಂಡಿರುವ ನಿರ್ಧಾರ ಕಾನೂನುಬಾಹಿರ. ಅವರಿಗೆ ಅನರ್ಹಗೊಳಿಸುವ ಯಾವುದೇ ಹಕ್ಕಿಲ್ಲ. ಪ್ರಜಾಪ್ರಭುತ್ವದಲ್ಲಿ ನಾವು ಬಹುಸಂಖ್ಯಾತರು ಮತ್ತು ಇಲ್ಲಿ ಸಂಖ್ಯೆಗಳೇ ಬಹು ಮುಖ್ಯವಾಗಿದ್ದು, ಶಿವಸೇನಾ ತೆಗೆದುಕೊಂಡಿರುವ ಅನರ್ಹಗೊಳಿಸುವ ನಿರ್ಧಾರ ಕಾನೂನುಬಾಹಿರವಾಗಿದೆ ಎಂದು ಪುನರುಚ್ಛರಿಸಿದರು.
ಬಂಡಾಯ ಶಾಸಕರು ಮತ್ತು ಶಿವಸೇನಾ ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಶಿಂಧೆ ಹೇಳಿದ್ದಾರೆ.
ಉದ್ಧವ್ ಠಾಕ್ರೆ ತಂಡವು 12 ಬಂಡಾಯ ಶಾಸಕರ ಅನರ್ಹತೆಗಾಗಿ ಡೆಪ್ಯುಟಿ ಸ್ಪೀಕರ್ಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, 37 ಬಂಡಾಯ ಶಾಸಕರು ರಾಜ್ಯಪಾಲರು ಮತ್ತು ಉಪಸಭಾಪತಿಗೆ ಪತ್ರ ಬರೆದಿದ್ದು, ಏಕನಾಥ್ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಹೆಸರಿಸಿದ್ದಾರೆ.
ಯಾರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದೀರಿ? ಕಾನೂನು ನಮಗೂ ತಿಳಿದಿದೆ. ಸಂವಿಧಾನದ 10 ನೇ ಶೆಡ್ಯೂಲ್ ಪ್ರಕಾರ ವಿಪ್ ಸಭೆಗೆ ಅನ್ವಯಿಸುವುದಿಲ್ಲ ಎಂದು ಏಕನಾಥ್ ಶಿಂಧೆ ಟ್ವೀಟ್ ಮಾಡಿದ್ದಾರೆ. ಬುಧವಾರ ಉದ್ಧವ್ ಠಾಕ್ರೆ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಗೆ ತೆರಳದ ಶಾಸಕರನ್ನು ಅನರ್ಹಗೊಳಿಸುವುದಾಗಿ ಶಿವಸೇನೆ ಬೆದರಿಕೆ ಹಾಕಿದ ಬೆನ್ನಲ್ಲೇ ಶಿಂಧೆ ಟ್ವೀಟ್ ಮಾಡಿದ್ದಾರೆ.
ಸದ್ಯ ಇಡೀ ದೇಶ ಮಹಾರಾಷ್ಟ್ರ ರಾಜಕಾರಣದತ್ತ ಕಣ್ಣು ಹಾಯಿಸಿದೆ. ಅಲ್ಲ ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನವಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. (ಏಜೆನ್ಸೀಸ್)