

ಹೈದರಾಬಾದ್: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಪ್ಯಾನ್ ಇಂಡಿಯಾ ಸಿನಿಮಾ "ಪುಷ್ಪ" ಇನ್ನೆರೆಡು ದಿನಗಳಲ್ಲಿ ಭಾರತಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಇತ್ತೀಚೆಗಷ್ಟೇ ಚಿತ್ರತಂದ ಪ್ರಿ ರೀಲಿಸ್ ಈವೆಂಟ್ ಕೂಡ ಅದ್ಧೂರಿಯಾಗಿ ನಡೆದಿದೆ.
ಪುಷ್ಪ ಚಿತ್ರ 2 ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗ ಪುಷ್ಪ ದಿ ರೈಸ್ ಡಿ. 17ರಂದು ತೆರೆಗೆ ಅಪ್ಪಳಿಸಲಿದೆ. ಚಿತ್ರತಂಡ ಸಿನಿಮಾ ಬಿಡುಗಡೆಯ ಕೊನೆಯ ಹಂತದವರೆಗೂ ಪ್ರಚಾರದಲ್ಲಿ ತೊಡಗಿಕೊಂಡಿದೆ. ರಶ್ಮಿಕಾ ಕೂಡ ಸಾಲು ಸಾಲು ಸಂದರ್ಶನಗಳನ್ನು ಎದುರಿಸುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ರಶ್ಮಿಕಾ ನೀಡಿರುವ ಹೇಳಿಕೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಪ್ರಚಾರದ ಭಾಗವಾಗಿ ತೆಲುಗು ಯೂಟ್ಯೂಬ್ ಚಾನೆಲ್ ಒಂದಕ್ಕೆ ರಶ್ಮಿಕಾ ಸಂದರ್ಶನ ನೀಡಿದ್ದಾರೆ. ನನಗೆ ಪುಷ್ಪ ಚಿತ್ರದ ಕತೆ ಏನು ಎಂಬುದೇ ಗೊತ್ತಿಲ್ಲ ಎಂದಿದ್ದಾರೆ. ಪುಷ್ಪ ಚಿತ್ರದ ಕತೆಯನ್ನು ಕೇಳಿದಾಗ ನಿಮಗೆ ಅನಿಸಿದ್ದೇನು ಎಂದು ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ನಿರ್ದೇಶಕ ಸುಕುಮಾರ್ ಅವರು ನನಗೆ ಚಿತ್ರದ ಇಡೀ ಕತೆಯನ್ನು ಹೇಳಲಿಲ್ಲ. ಕೇವಲ ನನ್ನ ಪಾತ್ರವನ್ನು ಮಾತ್ರ ವಿವರಿಸಿದರು. ಅವರಲ್ಲಿದ್ದ ಆತ್ಮವಿಶ್ವಾಸ ನನಗೆ ಇಷ್ಟವಾಯಿತು. ಚಿತ್ರೀಕರಣದ ವೇಳೆಯೂ ನನ್ನ ಪಾತ್ರ ನನಗೆ ತೃಪ್ತಿ ತಂದಿತು. ಪ್ರತಿ ಹಂತದಲ್ಲಿ ನನ್ನ ಪಾತ್ರಕ್ಕೆ ಉತ್ತಮ ಮನ್ನಣೆ ಸಿಗುತ್ತದೆ ಎಂಬ ನಂಬಿಕೆ ಬಲವಾಗುತ್ತಲೇ ಇತ್ತು. ಮೊದಲ ಭಾಗ ಮುಗಿದಾಗ ಬೇಸರವೆನಿಸಿತು. ಎರಡನೇ ಭಾಗ ಯಾವಾಗ ಆರಂಭವಾಗುತ್ತದೆ ಎಂಬ ಕಾತರದಲ್ಲಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಪುಷ್ಪ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಮಾಡಿದ್ದು, ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. (ಏಜೆನ್ಸೀಸ್)