

ಆಸ್ತಾನ: ರಷ್ಯಾ ಸೇನೆಯ ಜೊತೆ ನ್ಯಾಟೋ (NATO) ಪಡೆಗಳ ಯಾವುದೇ ನೇರ ಸಂಪರ್ಕ ಅಥವಾ ನೇರ ಘರ್ಷಣೆಯು ಜಾಗತಿಕ ದುರಂತಕ್ಕೆ ಎಡೆಮಾಡಿಕೊಡಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಎಚ್ಚರಿಕೆಯನ್ನು ನೀಡಿದ್ದಾರೆ.
ಕಜಕಿಸ್ತಾನದ ರಾಜಧಾನಿ ಆಸ್ತಾನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, ರಷ್ಯಾ ಸೇನೆಯ ಜೊತೆ ನ್ಯಾಟೋ (NATO) ಪಡೆಗಳ ಯಾವುದೇ ನೇರ ಸಂಪರ್ಕ ಅಥವಾ ನೇರ ಘರ್ಷಣೆಯು ತುಂಬಾ ಅಪಾಯಕಾರಿ. ಇದರಿಂದ ಜಾಗತಿಕ ದುರಂತ ಸಂಭವಿಸಬುದು. ಹೀಗಾಗಿ ಇಂತಹ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಪುಟಿನ್ ಹೇಳಿದರು.
ಕಳೆದ ತಿಂಗಳು ಯೂಕ್ರೇನ್‌ನ ನಾಲ್ಕು ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ನಂತರ ರಷ್ಯಾದ ಪ್ರದೇಶವನ್ನು ರಕ್ಷಿಸುವ ಸಮಯ ಬಂದಲ್ಲಿ, ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಪುಟಿನ್ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ವಿಶ್ವಸಂಸ್ಥೆ ಪುಟಿನ್ ಕ್ರಮವನ್ನು ಖಂಡಿಸಿತು.
ಯೂಕ್ರೇನ್ ಮೇಲೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದರೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಳೆದ ಗುರುವಾಗ ಜಿ7 ರಾಷ್ಟ್ರಗಳು ರಷ್ಯಾಗೆ ಎಚ್ಚರಿಕೆ ನೀಡಿದೆ. ಈ ಕುರಿತು ಅಮೆರಿಕದ ವೈಟ್ಹೌಸ್ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಅಲ್ಲದೆ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ರಷ್ಯಾಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಅಮೆರಿಕನ್ ಸಂಸ್ಥೆಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)