ಕೆಜಿಎಫ್​-2 ಚಿತ್ರತಂಡಕ್ಕೆ ತಲೆನೋವಾದ ಪ್ರಕಾಶ್​ ರಾಜ್​! ಬೇಡ ಸುಮ್ನಿರಿ ಸರ್​... ತೆರೆಮರೆಯಲ್ಲಿ ಕಸರತ್ತು

KGF 2 Prakash Raj
Published on

ನವದೆಹಲಿ: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾ ಕೆಜಿಎಫ್​ ಚಾಪ್ಟರ್​-2 ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್​ 14ಕ್ಕೆ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಇದರ ನಡುವೆ ಕೆಜಿಎಫ್​ ಚಿತ್ರತಂಡಕ್ಕೆ ಆತಂಕವೊಂದು ಎದುರಾಗಿದೆ. ಅದಕ್ಕೆ ಕಾರಣ ಬಹುಭಾಷಾ ನಟ ಪ್ರಕಾಶ್​ ರಾಜ್​. ಅದು ಹೇಗೆ ಪ್ರಕಾಶ್​ ರಾಜ್​ ಕೆಜಿಎಫ್​ಗೆ ಆತಂಕ ಸೃಷ್ಟಿ ಮಾಡಿದರೂ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ.

ಕೆಜಿಎಫ್​ ಮತ್ತು ಪ್ರಕಾಶ್​ ರಾಜ್​ ನಡುವೆ ಇರುವ ಸಂಬಂಧಕ್ಕೂ ಮುನ್ನ ದಿ ಕಾಶ್ಮೀರ್​ ಫೈಲ್ಸ್​ ಮತ್ತು ಪ್ರಕಾಶ್​ ರಾಜ್​ ನಡುವಿನ ಹೊಸ ಸಂಬಂಧದ ಬಗ್ಗೆ ಹೇಳುತ್ತೇವೆ. ಇತ್ತೀಚೆಗೆ ಪ್ರಕಾಶ್​ ರಾಜ್​ ಅವರು ಕಾಶ್ಮೀರ್​ ಫೈಲ್ಸ್​ ಚಿತ್ರದ ಬಗ್ಗೆ ಟ್ವೀಟ್​ ಮಾಡಿದ್ದರು. ಅದೇನೆಂದರೆ, ಕಾಶ್ಮೀರ ಫೈಲ್ಸ್ ಚಿತ್ರವು ಹಳೆಯ ಗಾಯಗಳನ್ನು ವಾಸಿಮಾಡುತ್ತದೆಯೇ? ಅಥವಾ ಇದು ಹೆಚ್ಚು ಪ್ರಚೋದಿಸುತ್ತದೆಯೇ? ಅಥವಾ ದ್ವೇಷದ ಬೀಜಗಳನ್ನು ಬಿತ್ತುವುದೇ? ಜಸ್ಟ್​ ಆಸ್ಕಿಂಗ್​ ಎಂದು ಟ್ವೀಟ್​ ಮಾಡಿದ್ದರು. ಅಲ್ಲದೆ, ಟ್ವೀಟ್​ ಜತೆಗೆ ಕಾಶ್ಮೀರ ಫೈಲ್ಸ್​ ಚಿತ್ರ ವೀಕ್ಷಣೆ ಬಳಿಕ ಚಿತ್ರಮಂದಿರಲ್ಲಿ ವ್ಯಕ್ತಿಯೊರ್ವ ವೀಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ವಿಡಿಯೋವನ್ನು ಪೋಸ್ಟ್​ ಮಾಡಿದ್ದರು.

ಇಷ್ಟೇ ಅಲ್ಲದೆ, ಮತ್ತೊಂದು ಟ್ವೀಟ್​ನಲ್ಲಿ ಕಾಶ್ಮೀರ್​ ಫೈಲ್ಸ್​ ಚಿತ್ರದಂತೆ ಗೋಧ್ರಾ ಫೈಲ್ಸ್​, ದೆಹಲಿ ಫೈಲ್ಸ್​, ಜಿಎಸ್​ಟಿ ಫೈಲ್ಸ್​, ಡಿಮಾನೀಟೈಸ್​ ಫೈಲ್ಸ್​, ಕೋವಿಡ್​ ಫೈಲ್ಸ್​ ಮತ್ತು ಗಂಗಾ ಫೈಲ್ಸ್​ ಚಿತ್ರಗಳನ್ನು ತೆಗೆಯಿರಿ ಎಂದು ಕಿಡಿಕಾರಿದ್ದರು.

ಪ್ರಕಾಶ್​ ರಾಜ್​ ಮಾಡಿದ ಈ ಎರಡು ಟ್ವೀಟ್​ಗಳು ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದು, ಅವರ ವಿರುದ್ಧ ಜಾಲತಾಣದಲ್ಲಿ ಟೀಕೆಗಳ ಸುರಿಮಳೆಯಾಗುತ್ತಿದೆ. ಹಿಂದುಗಳ ಭಾವನೆಗಳಿಗೆ ಪ್ರಕಾಶ್​ ರಾಜ್​ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪವು ಇದೆ. ಅಲ್ಲದೆ, ಪ್ರಕಾಶ್​ ರಾಜ್​ ವಿರುದ್ಧ ಬಹಿಷ್ಕಾರ ಅಭಿಯಾನವನ್ನು ಆರಂಭಿಸಿದ್ದಾರೆ. ಇದರಿಂದ ಕೆಜಿಎಫ್​ ಚಿತ್ರತಂಡಕ್ಕೆ ನಡುಕ ಶುರುವಾಗಿದೆ. ಏಕೆಂದರೆ, ಕೆಜಿಎಫ್​ 2ನಲ್ಲಿ ಪ್ರಕಾಶ್​ ರಾಜ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಕಾಶ್​ ರಾಜ್​ ವಿರುದ್ಧ ಬಹಿಷ್ಕಾರ ಹಾಕಿರುವವರು ಕೆಜಿಎಫ್​ 2 ಸಿನಿಮಾವನ್ನು ವಿರೋಧಿಸಿದರೆ, ಚಿತ್ರಕ್ಕೆ ಹೊಡೆತ ಬೀಳುವುದು ಗ್ಯಾರೆಂಟಿ ಅಂದುಕೊಂಡಿದ್ದಾರೆ. ಹೀಗಾಗಿ ಚಿತ್ರದ ನಿರ್ಮಾಪಕರಿಗೆ ಹೊಸ ತಲೆನೋವು ಶುರುವಾಗಿದ್ದು, ಸಿನಿಮಾ ಬಿಡುಗಡೆ ಆಗುವವರೆಗಾದರೂ ಪ್ರಕಾಶ್​ ರಾಜ್​ ಅವರನ್ನು ಸುಮ್ಮನಿರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net