400 ಕೋಟಿ ರೂ. ಮೌಲ್ಯದ ಹೆರಾಯಿನ್​ ಸಾಗಿಸ್ತಿದ್ದ ಪಾಕ್​ ದೋಣಿ ಗುಜರಾತ್​ ಕರಾವಳಿಯಲ್ಲಿ ವಶ

Coast Gaurd
Published on

ನವದೆಹಲಿ: ಬರೋಬ್ಬರಿ 400 ಕೋಟಿ ರೂ. ಮೌಲ್ಯದ 77 ಕೆಜಿ ಹೆರಾಯಿನ್​ ಸಾಗಿಸುತ್ತಿದ್ದ ಪಾಕಿಸ್ತಾನ ಮೂಲದ ಮೀನುಗಾರರ ದೋಣಿ ಹಾಗೂ ಅದರಲ್ಲಿದ್ದ ಆರು ಮಂದಿಯನ್ನು ಗುಜರಾತಿನ ಕರಾವಳಿ ಪ್ರದೇಶದಲ್ಲಿ ವಶಕ್ಕೆ ಪಡೆದಿರುವುದಾಗಿ ಕರಾವಳಿ ಪಡೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಭಾರತೀಯ ಕರಾವಳಿ ಪಡೆ ಮತ್ತು ಗುಜರಾತಿನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್​) ಭಾನುವಾರ ಮಧ್ಯರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿತು. ಈ ವೇಳೆ ಗುಜರಾತಿನ ಕಚ್​​ ಜಿಲ್ಲೆಯ ಜಕಾಹು ಕರಾವಳಿಯಿಂದ 35 ನಾಟಿಕಲ್​ ಮೈಲಿ ದೂರದಲ್ಲಿ ಭಾರೀ ಪ್ರಮಾಣದ ಡ್ರಗ್ಸ್​ ವಶಕ್ಕೆ ಪಡೆದುಕೊಂಡಿದ್ದಾರೆ.

ಅಲ್​ ಹುಸೇನಿ ಹೆಸರಿನ ಪಾಕಿಸ್ತಾನ ಮೂಲದ ದೋಣಿ ಮತ್ತು ಅದರಲ್ಲಿದ್ದ ಆರು ಸಿಬ್ಬಂದಿಯನ್ನು ಹಾಗೂ 400 ಕೋಟಿ ರೂ. ಮೌಲ್ಯದ 77 ಕೆಜಿ ಹೆರಾಯಿನ್​ ಅನ್ನು ವಶಕ್ಕೆ ಪಡೆಯಲಾಗಿದೆ. ಪಾಕ್​ ದೋಣಿಯು ಭಾರತದ ಜಲಗಡಿ ವ್ಯಾಪ್ತಿಯಲ್ಲಿ ಇದ್ದಿದ್ದರಿಂದ ವಶಕ್ಕೆ ಪಡೆಯಲಾಗಿದೆ ಎಂದು ಗುಜರಾತಿನ ರಕ್ಷಣಾ ಪಿಆರ್​ಒ ಟ್ವೀಟ್​ ಮೂಲಕ ಮಾಹಿತಿ ನೀಡಿದೆ.

ವಶಕ್ಕೆ ಪಡೆದ ನಂತರ ದೋಣಿಯನ್ನು ಜಕಾಹು ಕರಾವಳಿ ಪ್ರದೇಶಕ್ಕೆ ಹೆಚ್ಚಿನ ತನಿಖೆಗಾಗಿ ತರಲಾಗಿದೆ. ಕರಾಚಿ ಬಂದರನ್ನು ಬಿಟ್ಟ ಪಾಕ್​ ದೋಣಿ ತನ್ನ ಕಾರ್ಯಸಾಧನೆಗೆ ಅತಿ ಹೆಚ್ಚಿನ ಆವರ್ತನ (VHF)ವುಳ್ಳ ರೇಡಿಯೋ ಚಾನೆಲ್ ಮತ್ತು ಹರಿ 1 ಮತ್ತು ಹರಿ 2 ಎಂಬ ಕೋಡ್​ ವರ್ಡ್​ ಮೂಲಕ ಡ್ರಗ್ಸ್​ ಅನ್ನು ಡೆಲಿವರಿ ಮಾಡುವ ಪ್ರಯತ್ನಕ್ಕೆ ಮುಂದಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡು ದೇಶಗಳ ನಡುವಿನ ಅಂತಾರಾಷ್ಟ್ರೀಯ ಕಡಲ ಗಡಿಯನ್ನು ದಾಟಿ ಜಕಾಹು ಕರಾವಳಿಯಿಂದ 35 ನಾಟಿಕಲ್​ ಮೈಲಿ ದೂರದಲ್ಲಿದೆ ಎಂಬ ಮಾಹಿತಿ ಮೇರೆಗೆ ಕರಾವಳಿ ಪಡೆ ಮತ್ತು ಎಟಿಎಸ್​ ಜಂಟಿ ಕಾರ್ಯಾಚರಣೆ ನಡೆಸಿ ಡ್ರಗ್ಸ್​, ದೋಣಿ ಮತ್ತು ಪಾಕ್​ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಪಾಕಿಸ್ತಾನದ ಸ್ಮಗ್ಲರ್​ಗಳಾದ ಹಜಿ ಹಸನ್​ ಮತ್ತು ಹಜಿ ಹಸಮ್​ ಎಂಬುವರು ಪಂಜಾಬ್‌ನ ಭೂಗತ ಜಗತ್ತಿನ ಸಂಪರ್ಕ ಇರುವವರಿಗೆ ಡ್ರಗ್ಸ್​ ಡೆಲಿವರಿ ಮಾಡುತ್ತಿದ್ದ ಎಂದು ವಶಕ್ಕೆ ಪಡೆದಿರುವ ಪಾಕಿಸ್ತಾನಿ ಪ್ರಜೆಗಳು ಬಾಯ್ಬಿಟ್ಟಿದ್ದಾರೆ. ಡ್ರಗ್ಸ್​ ಅನ್ನು ಗುಜರಾತ್ ಕರಾವಳಿಯ ಕಚ್‌ನಲ್ಲಿ ಎಲ್ಲೋ ಆಫ್‌ಲೋಡ್ ಮಾಡಬೇಕಾಗಿತ್ತು ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net