

ಕರಾಚಿ: ಪಾಕಿಸ್ತಾನದ ಪ್ರತ್ಯೇಕತಾವಾದಿ ಗುಂಪಿಗೆ ಸೇರಿದ ಮಹಿಳಾ ಆತ್ಮಾಹುತಿ ಬಾಂಬರ್ ದಾಳಿಗೆ ಮೂವರು ಚೀನಾ ಪ್ರಜೆಗಳು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಕರಾಚಿಯಲ್ಲಿ ನಡೆದಿದೆ.
ಕರಾಚಿ ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆಗೊಂಡಿರುವ ಚೀನಾದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ಗೆ ಸಂಬಂಧಿಸಿದ ಸಿಬ್ಬಂದಿ ವಾಹನದ ಮೇಲೆ ಗುರಿಯಾಗಿಸಿ ಮಹಿಳಾ ಬಾಂಬರ್ ದಾಳಿ ಮಾಡಿದ್ದಾಳೆ.
ದಾಳಿಯ ಹೊಣೆಯನ್ನು ಬಲೋಚ್ ಲಿಬರೇಷನ್ ಆರ್ಮಿ ಹೊತ್ತುಕೊಂಡಿದೆ. ಇಂದು ಕರಾಚಿಯಲ್ಲಿ ಚೀನಿಯರ ಮೇಲೆ ನಡೆದ ಆತ್ಮಾಹುತಿ ದಾಳಿಗೆ ನಾವೇ ಹೊಣೆ ಎಂದು ಸಂಘಟನೆಯ ವಕ್ತಾರ ಜೀಯಂದ್ ಬಲೋಚ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಇದೇ ಮೊದಲ ಬಾರಿಗೆ ಮಹಿಳಾ ಸೂಸೈಡ್ ಬಾಂಬರ್ ಅನ್ನು ಬಳಸಿರುವುದಾಗಿ ಹೇಳಿದ್ದಾನೆ.
ದಾಳಿಯಲ್ಲಿ ಮೂವರು ಚೀನಾ ಪ್ರಜೆಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಕರಾಚಿ ಪೊಲೀಸರು ಖಚಿತಪಡಿಸಿದ್ದಾರೆ. ಬಲುಚಿಸ್ತಾನ್ ಪ್ರಾಂತ್ಯದಲ್ಲಿ ಚೀನಾದ ಮೇಲೆ ಪ್ರತ್ಯೇಕತಾವಾದಿಗಳು ನಿಯಮಿತವಾಗಿ ದಾಳಿ ಮಾಡುತ್ತಿರುತ್ತಾರೆ. ಚೀನಾ ಸರ್ಕಾರವೂ ತನ್ನ ಬೆಲ್ಟ್ ಮತ್ತು ರೋಡ್ ಯೋಜನೆಯ ಭಾಗವಾಗಿ ಬೃಹತ್ ಮೂಲಸೌಕರ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವುದು ಬಲುಚಿಸ್ತಾನ್ ಪ್ರತ್ಯೇಕತವಾದಿ ಗುಂಪಿಗೆ ಇಷ್ಟವಿಲ್ಲ. ಅದನ್ನು ವಿರೋಧಿಸುತ್ತಲೇ ಬರುತ್ತಿದ್ದು, ಅದರ ಭಾಗವಾಗಿ ಇಂದು ಬಾಂಬ್ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಬಲೂಚಿಸ್ತಾನ್ ಪ್ರದೇಶದಲ್ಲಿ ಲಾಭದಾಯಕ ಗಣಿಗಾರಿಕೆ ಮತ್ತು ಇಂಧನ ಯೋಜನೆಗಳ ವಿರುದ್ಧ ಪ್ರತ್ಯೇಕತಾವಾದಿಗಳು ದೀರ್ಘಕಾಲದಿಂದ ಅಸಮಾಧಾನವನ್ನು ಹೊಂದಿದ್ದಾರೆ, ಸ್ಥಳೀಯರು ಇದರ ಪ್ರಯೋಜನಗಳನ್ನು ಅನುಭವಿಸುವುದಿಲ್ಲ ಎಂಬುದೇ ಅವರ ಅಸಮಾಧಾನಕ್ಕೆ ಕಾರಣ ಎಂದು ತಿಳಿದುಬಂದಿದೆ. (ಏಜೆನ್ಸೀಸ್)