

ಬಿರ್ಭಮ್: ಆಟೋ ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯ ಮಲ್ಲರ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತ 9 ಮಂದಿಯಲ್ಲಿ 8 ಮಂದಿ ಮಹಿಳಾ ಕಾರ್ಮಿಕರು. ಬಿರ್ಭಮ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 60ರಲ್ಲಿ ಈ ಘಟನೆ ನಡೆದಿದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿದ್ದ ಆಟೋ ಮತ್ತು ಬಸ್ ನಡುವೆ ಈ ಅಪಘಾತ ಸಂಭವಿಸಿದ್ದು, ಆಟೋದಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಬೆನ್ನಲ್ಲೇ ಪ್ರಧಾನಿ ಮೋದಿ ಮೃತರ ಸಾವಿಗೆ ಸಂತಾಪ ಸೂಚಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಗಾಯಾಳುಗಳ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ ಮತ್ತು ಗಾಯಾಳುಗಳ ಚಿಕಿತ್ಸೆಗೆ 50 ಸಾವಿರ ರೂ. ಘೋಷಿಸಿದ್ದಾರೆ.
ಇದಕ್ಕೂ ಮುನ್ನ ಭಾನುವಾರ ಮುಂಜಾನೆ, ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನಲ್ಲಿ ಜಲ್ಪೇಶ್ ದೇವಸ್ಥಾನದ ಮಾರ್ಗವಾಗಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ವ್ಯಾನ್ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ 10 ಜನರು ಸಾವನ್ನಪ್ಪಿದರು. ಈ ಘಟನೆ ನಡೆದ ಎರಡು ದಿನದ ಬೆನ್ನಲ್ಲೇ ಇದೀಗ ಭೀಕರ ಅಪಘಾತ ಸಂಭವಿಸಿ 9 ಮಂದಿ ಅಸುನೀಗಿದ್ದಾರೆ. (ಏಜೆನ್ಸೀಸ್)