ಮೈಸೂರು ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ? ಪಿಯುಸಿ ಓದುತ್ತಿದ್ದ ಮಗಳನ್ನೇ ಹತ್ಯಗೈದ ತಂದೆ-ತಾಯಿ

Honor Death
Published on

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿದೆ ಎನ್ನಲಾಗಿದೆ. ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಹೆತ್ತವರಿಂದಲೇ ಅಪ್ರಾಪ್ತ ಮಗಳ ಕೊಲೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪಿರಿಯಾಪಟ್ಟಣ ತಾಲ್ಲೂಕು ಕಗ್ಗುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ. ದ್ವಿತೀಯ ಪಿಯು ವಿಧ್ಯಾರ್ಥಿನಿ ಶಾಲಿನಿ (17) ಕೊಲೆಯಾದ ದುರ್ದೈವಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಸುರೇಶ್ ಹಾಗೂ ತಾಯಿ ಬೇಬಿಯನ್ನು ಪಿರಿಯಾಪಟ್ಟಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಲೆಯಾದ ಶಾಲಿನಿ, ಪಕ್ಕದ ಗ್ರಾಮದ ಮೆಲ್ಲಹಳ್ಳಿಯ ಯುವಕ ಮಂಜು ಎಂಬಾತನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಗೆ ಶಾಲಿನಿ ಪಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದರು. ವಿರೋಧದ ನಡುವೆಯೂ ಮದುವೆಯಾಗಲು ಪ್ರೇಮಿಗಳು ನಿರ್ಧರಿಸಿದ್ದರು. ಇದಲ್ಲದೆ, ಪ್ರಿಯಕರನಿಗಾಗಿ ಶಾಲಿನಿ ಮನೆ ಬಿಟ್ಟಿದ್ದಳು.

ಮಗಳು ಮನೆ ಬಿಟ್ಟ ಬಳಿಕ ಪಾಲಕರು ಠಾಣೆ ಮೆಟ್ಟಲೇರಿದ್ದರು. ನಾನು ಮನೆಗೆ ಹೋಗುವುದಿಲ್ಲ ಎಂದು ಠಾಣೆಯಲ್ಲೇ ಪೊಲೀಸರ ಮುಂದೆ ಶಾಲಿನಿ ಪಟ್ಟು ಹಿಡಿದಿದ್ದಳು. ಬಳಿಕ ಶಾಲಿನಿಯನ್ನು ಬಾಲಮಂದಿರದ ವಶಕ್ಕೆ ನೀಡಲಾಗಿತ್ತು. ಇತ್ತೀಚೆಗೆ ಮಗಳನ್ನು ಮನೆಗೆ ಕರೆತಂದಿದ್ದರು. ಇದಾದ ಕೆಲವೇ ದಿನಗಳಲ್ಲಿ ಶಾಲಿನಿ ಮೃತದೇಹ ಜಮೀನಿನಲ್ಲಿ ಪತ್ತೆಯಾಗಿದೆ.

ತಮಗೆ ಅವಮಾನ ಮಾಡಿದಕ್ಕೆ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಶಾಲಿನಿ ಪಾಲಕರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net