ಐಷಾರಾಮಿ ಜೀವನಕ್ಕಾಗಿ ಕೆಟ್ಟ ಕೆಲ್ಸಕ್ಕೆ ಇಳಿದಿದ್ದ ಯೂಟ್ಯೂಬರ್ ಅರೆಸ್ಟ್​: ಮನೆಯಲ್ಲಿ ಮೂಟೆಗಟ್ಟಲೆ ಚಪ್ಪಲಿ, ಶೂಗಳು ಪತ್ತೆ!

Youtuber
Published on

ಮುಂಬೈ: ಐಷಾರಾಮಿ ಜೀವನ ನಡೆಸಲು ಸರಣಿ ಕಳ್ಳತನ ಮಾಡುತ್ತಿದ್ದ ಪ್ರಖ್ಯಾತ ಯೂಟ್ಯೂಬರ್​ನನ್ನು ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಆರೋಪಿಯ ಹೆಸರು ಅಭಿಮನ್ಯು ಗುಪ್ತ. ಈತ ಸೋಶಿಯಲ್ ​ಮೀಡಿಯಾ ಇನ್ಫ್ಲ್ಯುಯೆನ್ಸರ್​. ಭಾರತದಲ್ಲಿ ಬ್ಯಾನ್​ ಆಗಿರುವ ಟಿಕ್​ಟಾಕ್​ನಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿದ್ದ. ಬಂಧಿತನಿಂದ 14 ಮೊಬೈಲ್​ ಫೋನ್​, ಹರಿತ ಆಯುಧಗಳು, ನಕಲಿ ಆಭರಣಗಳು ಹಾಗೂ ನಕಲಿ ವಿದೇಶಿ ಕರೆನ್ಸಿ ಸೇರಿದಂತೆ ಅನೇಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮುಂಬೈನ ವಿಬಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಮುಂಬೈ, ನವಿ ಮುಂಬೈ ಹಾಗೂ ಥಾಣೆಯ ಅನೇಕ ಕಡೆ ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡಿರುವ ಆರೋಪ ಯೂಟ್ಯೂಬರ್​ ಮೇಲಿದೆ. ತನ್ನ ಗುರುತನ್ನು ಮರೆ ಮಾಚಲು ಕ್ಯಾಪ್​ ಮತ್ತು ಮಾಸ್ಕ್​ ಧರಿಸುತ್ತಿದ್ದ. ಕಳೆದ ವಾರ ಮುಂಬೈ ಉಪನಗರ ಕುರ್ಲಾದಲ್ಲಿ ಮನೆಯೊಂದರ ಬೀಗ ಮುರಿದು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದ.

ಕುಟುಂಬವೊಂದು ಮರಳಿ ಮನೆಗೆ ಬಂದು ನೋಡಿದಾಗ ಚಿನ್ನಾಭರಣ ಕಳುವಾಗಿರುವುದನ್ನು ಗಮನಿಸಿ, ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಆರೋಪಿಯ ಪತ್ತೆ ಸುಲಭವಾಗಿರಲಿಲ್ಲ. ಆತ ಕ್ಯಾಪ್​ ಮತ್ತು ಮಾಸ್ಕ್​ ಧರಿಸಿದ್ದರಿಂದ ಸುಮಾರು 150 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಆತನ ಗುರುತು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಆದರೆ, ಕಳ್ಳ ಎಷ್ಟು ದಿನ ಅಂತಾ ತಲೆಮರೆಸಿಕೊಳ್ಳಲು ಸಾಧ್ಯ. ಒಂದಲ್ಲ ಒಂದು ಕ್ಷಣದಲ್ಲಿ ಆತ ಸಿಕ್ಕಿಬೀಳಲೇಬೇಕು ಎಂಬ ಮಾತಿದೆ. ಅದರಂತೆ ಒಂದು ಸ್ಥಳದಲ್ಲಿ ಆರೋಪಿ ತನ್ನ ಕ್ಯಾಪ್​ ಮತ್ತು ಮಾಸ್ಕ್​ ತೆಗೆಯುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆಗಲೇ ಗೊತ್ತಾಗಿದ್ದು, ಆತ ಟಿಕ್​ಟಾಕರ್​ ಗುಪ್ತಾ ಎಂಬುದು. ಆರೋಪಿ ಕುರ್ಲಾಗೆ ಬಂದಿರುವ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಮುಂಬೈ ವಲಯದಲ್ಲಿ ಸುಮಾರು 15 ಮನೆಗಳಲ್ಲಿ ಕನ್ನ ಹಾಕಿದ್ದಾಗಿ ಬಾಯ್ಬಿಟ್ಟಿದ್ದಾನೆ. ಕಳ್ಳತನ ಮಾಡಿದ ನಂತರ, ಆರೋಪಿ ಗುಪ್ತ, ಮನೆಯ ಹೊರಗೆ ಇರಿಸಲಾದ ಶೂಗಳು ಮತ್ತು ಚಪ್ಪಲಿಗಳನ್ನು ಸಹ ಕದಿಯುತ್ತಿದ್ದರು ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ. ಪಾದರಕ್ಷೆಗಳು ತುಂಬಿದ್ದ ನಾಲ್ಕು ಗೋಣಿ ಚೀಲಗಳನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಖ್ಯಾತ ವ್ಯಕ್ತಿಗಳೊಂದಿಗೆ ವಿಡಿಯೋ ಮಾಡಿರುವ ಆರೋಪಿ, ಕ್ಯಾಸಿನೋಗಳಲ್ಲಿ ಹಣ ಖರ್ಚು ಮಾಡಿದ್ದನ್ನು ಮತ್ತು ದುಬಾರಿ ಬಟ್ಟೆಗಳನ್ನು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆಂದು ಅಧಿಕಾರಿಗಳು ತಿಳಿಸಿದರು. ಗುಪ್ತ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 380 (ಕಳ್ಳತನದ ಮನೆ) ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net