

ನವದೆಹಲಿ: ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ಗಾಗಿ ಪ್ರಧಾನಿ ಮೋದಿ ಅವರ ತಮ್ಮ ತವರು ಗುಜರಾತಿನ ಅಹಮದಾಬಾದ್ನಲ್ಲಿ "ನಮಸ್ತೆ ಟ್ರಂಪ್" ಹೆಸರಿನಲ್ಲಿ ಬಹುದೊಡ್ಡ ಕಾರ್ಯಕ್ರಮ ನಡೆಸಿದ್ದರು. ಕುಟುಂಬ ಸಮೇತ ಆಗಮಿಸಿದ್ದ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಮಾಡಿ ಅಮೆರಿಕಕ್ಕೆ ಹಿಂದಿರುಗಿದ್ದರು. ಈ ಎರಡು ದಿನಗಳು ಭಾರತ ಸರ್ಕಾರ ಖರ್ಚು ಮಾಡಿದ ಒಟ್ಟು ಹಣ ಎಷ್ಟು ಎಂಬುದು ಇದೀಗ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಬಹಿರಂಗವಾಗಿದೆ.
ಟ್ರಂಪ್ ಕುಟುಂಬ ಒಟ್ಟು 36 ಗಂಟೆಗಳ ಕಾಲ ಭಾರತದಲ್ಲಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರ 36 ಲಕ್ಷ ರೂಪಾಯಿ ಖರ್ಚು ಮಾಡಿರುವುದು ಆರ್ಟಿಐಯಲ್ಲಿ ಬಯಲಾಗಿದೆ. ಈ ಹಣವನ್ನು ಟ್ರಂಪ್ ಕುಟುಂಬದ ವಸತಿ, ಆಹಾರ ಮತ್ತು ಇತರೆ ಅಗತ್ಯತೆಗಳಿಗಾಗಿ ಬಳಸಲಾಗಿದೆ ಎಂದು ಆರ್‌ಟಿಐ ಅಡಿಯಲ್ಲಿ ಭಾರತ ಸರ್ಕಾರ ಮಾಹಿತಿ ನೀಡಿದೆ.
ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಎಷ್ಟು ಖರ್ಚು ಮಾಡಿದೆ ಎಂಬ ಮಾಹಿತಿ ನೀಡುವಂತೆ ಆರ್‌ಟಿಐ ಕಾರ್ಯಕರ್ತ ಮಿಶಾಲ್ ಭಥೇನಾ ಎಂಬುವರು ಆರ್‌ಟಿಐ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಸರ್ಕಾರದ ಕೇಂದ್ರ ವಿದೇಶಾಂಗ ಸಚಿವಾಲಯ ಉತ್ತರ ನೀಡಿದೆ. ಮಿಶಾಲ್ ಭಥೇನಾ ಅವರು 2020ರ ಅಕ್ಟೋಬರ್ 24 ರಂದೇ ಆರ್‌ಟಿಐ ಅರ್ಜಿಯ ಮೂಲಕ ವಿವರಗಳನ್ನು ಕೇಳಿದ್ದರು. ಆದರೆ, ಈವರೆಗೂ ಯಾವುದೇ ಉತ್ತರ ಬಂದಿರಲಿಲ್ಲ. ಇದರೊಂದಿಗೆ ಮಾಹಿತಿ ಆಯೋಗದ ಮೊರೆ ಹೋಗಲಾಗಿತ್ತು. ಕರೊನಾ ಕಾರಣ ಮಾಹಿತಿ ನೀಡಲು ವಿಳಂಬವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಂತಿಮವಾಗಿ ಈಗ ವಿವರಗಳನ್ನು ನೀಡಿದೆ.
2020ರ ಫೆ. 24 ಮತ್ತು 25ನೇ ತಾರೀಖಿನಂದು ಟ್ರಂಪ್ ಅಹಮದಾಬಾದ್ ಮತ್ತು ದೆಹಲಿ ಪ್ರವಾಸ ಮಾಡಿದ್ದರು. ಈ ವೇಳೆ ಟ್ರಂಪ್ ಪತ್ನಿ ಮೆಲಾನಿಯಾ, ಮಗಳು ಇವಾಂಕಾ, ಅಳಿಯ ಜರೇದ್ ಕುಶ್ನರ್ ಹಾಗೂ ಅನೇಕ ಅಮೆರಿಕದ ಅಧಿಕಾರಿಗಳು ಡೊನಾಲ್ಡ್ ಟ್ರಂಪ್ ಜೊತೆಯಾಗಿದ್ದರು.
ಟ್ರಂಪ್ ದಂಪತಿ ಪ್ರವಾಸದ ಝಲಕ್
ಎರಡು ದಿನಗಳ ಪ್ರವಾಸ ನಿಮಿತ್ತ ಫೆ. 24ರ ಬೆಳಗ್ಗೆ ಅಹಮದಾಬಾದ್ಗೆ ಬಂದಿಳಿದ ಟ್ರಂಪ್ ದಂಪತಿ, ಅದ್ಧೂರಿ ರೋಡ್ ಶೋ ಮೂಲಕ ಸಬರಮತಿ ಆಶ್ರಮ ಭೇಟಿ ನೀಡಿದರು. ಬಳಿಕ ವಿಶ್ವದ ಬಹುದೊಡ್ಡ ಮೊಟೆರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ “ನಮಸ್ತೆ ಟ್ರಂಪ್” ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ಅಹಮದಾಬಾದ್ನಿಂದ ಆಗ್ರಾಗೆ ತೆರಳಿದ ಟ್ರಂಪ್ ದಂಪತಿ ತಾಜ್ ಮಹಲ್ ವೀಕ್ಷಣೆ ಮಾಡಿದ ನಂತರ ದೆಹಲಿಗೆ ಆಗಮಿಸಿ, ಅಲ್ಲಿಯೇ ತಂಗಿದರು.
ಫೆ. 25ರ ಬೆಳಗ್ಗೆ ಟ್ರಂಪ್ ಗೌರವಾರ್ಥ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಯಿತು. ಬಳಿಕ ರಾಜ್ಘಾಟ್ಗೆ ಟ್ರಂಪ್ ದಂಪತಿ ಭೇಟಿ ನೀಡಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದರು. ಬಳಿಕ ದೆಹಲಿಯ ಹೈದರಾಬಾದ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು. ಬಳಿಕ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಇದರ ನಡುವೆ ದೆಹಲಿಯ ಸರ್ಕಾರಿ ಶಾಲೆಯೊಂದಕ್ಕೆ ಮೆಲನಿಯಾ ಟ್ರಂಪ್ ಭೇಟಿ ನೀಡಿದರು. ಮಧ್ಯಾಹ್ನ ಅಮೆರಿಕ ರಾಯಭಾರ ಕಚೇರಿಯಲ್ಲಿ ಸಿಇಒಗಳ ದುಂಡುಮೇಜಿನ ಸಭೆ ನಡೆಯಿತು. ಬಳಿಕ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ ಟ್ರಂಪ್ ಔತಣಕೂಟದಲ್ಲಿ ಪಾಲ್ಗೊಂಡರು. ಬಳಿಕ ರಾತ್ರಿ 10:30ಕ್ಕೆ ಟ್ರಂಪ್ ದಂಪತಿ ಅಮೆರಿಕಗೆ ಪ್ರಯಾಣ ಬೆಳೆಸಿದರು. (ಏಜೆನ್ಸೀಸ್)