ಬಿಸಿಯೂಟ ಸಹಾಯಕರ ಗೌರವಧನ 1 ಸಾವಿರ ರೂ.ಹೆಚ್ಚಳ

Meals
Published on

ಬೆಂಗಳೂರು : ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರು ಮತ್ತು ಸಹಾಯಕರ ಗೌರವಧನವನ್ನು ತಲಾ 1000 ರೂ. ಹೆಚ್ಚಳ ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಇದರಿಂದ ಮುಖ್ಯ ಅಡುಗೆಯವರಿಗೆ ಇದ್ದ 2700 ರೂ. ಗೌರವಧನ 3700 ರೂ.ಗೆ, ಅಡುಗೆ ಸಹಾಯಕರಿಗೆ ಇದ್ದ 2600 ರೂ. ಗೌರವಧನ 3600 ರೂ.ಗೆ ಹೆಚ್ಚಳವಾಗಲಿದೆ. ಇದು ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಿಂದಲೇ ಜಾರಿಗೆ ಬರಲಿದೆ.

ಈ ಆದೇಶದಿಂದ ಒಟ್ಟಾರೆಯಾಗಿ 47,250 ಮಂದಿ ಮುಖ್ಯ ಅಡುಗೆಯವರು ಮತ್ತು 71,336 ಅಡುಗೆ ಸಹಾಯಕರು ಸೇರಿ ಪಟ್ಟು 1,18,586 ಬಿಸಿಯೂಟ ಕಾರ್ಯಕರ್ತರಿಗೆ ಗೌರವಧನ ಹೆಚ್ಚಳದ ಪ್ರಯೋಜನ ಸಿಗಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಬಿಸಿಯೂಟ ಕಾರ್ಯಕರ್ತರ ಗೌರವಧನವನ್ನು 1000 ರೂ. ಹೆಚ್ಚಳ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಈಗ ಅಧಿಕೃತ ಆದೇಶ ಹೊರಬಿದ್ದಿದೆ. ಗೌರವಧ ಹೆಚ್ಚಳಕ್ಕೆ ಅಗತ್ಯವಿರುವ 118.58 ಕೋಟಿ ರೂ. ಅನುದಾನವನ್ನು 2022-23ನೇ ಸಾಲಿನ ಬಿಸಿಯೂಟ ಯೋಜನೆಗೆ ನಿಗದಿಪಡಿಸಿರುವ 432.81 ಕೋಟಿ ರೂ. ವಾರ್ಷಿಕ ಅನುದಾನದಿಂದ ಭರಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net