ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾರ ಪುತ್ರ ಜೈನ್​ ನಾದೆಲ್ಲಾ ನಿಧನ

Satya Nadella
Published on

ನವದೆಹಲಿ: ಮೈಕ್ರೋಸಾಫ್ಟ್​ ಕಂಪನಿಯ ಸಿಇಒ ಭಾರತ ಮೂಲದ ಸತ್ಯ ನಾದೆಲ್ಲಾ ಅವರ 26 ವರ್ಷದ ಪುತ್ರ ಜೈನ್​ ನಾದೆಲ್ಲ ಅವರು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಜೈನ್​ ನಾದೆಲ್ಲಾ ಅವರು ಹುಟ್ಟಿನಿಂದಲೇ ಮೆದುಳಿನ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದರು. ಮಗ ಮೃತಪಟ್ಟಿರುವ ವಿಚಾರವನ್ನು ಸತ್ಯ ನಾದೆಲ್ಲ ಅವರು ಈಮೇಲ್​ ಮೂಲಕ ತಮ್ಮ ಸಿಬ್ಬಂದಿಗೆ ತಿಳಿಸಿದ್ದಾರೆ. ಈ ದುಃಖದ ಸಮಯದಲ್ಲಿ ಕುಟುಂಬಕ್ಕೆ ಖಾಸಗಿ ಸಮಯ ನೀಡಲು ಮತ್ತು ಅವರ ಪರವಾಗಿ ಪ್ರಾರ್ಥಿಸುವಂತೆ ಕೋರಿ ನಾದೆಲ್ಲ ಅವರು ಈಮೇಲ್​ ಮೂಲಕ ಕೇಳಿಕೊಂಡಿದ್ದಾರೆ.

2014ರಿಂದ ಮೈಕ್ರೋಸಾಫ್ಟ್​ ಕಂಪನಿಯ ಸಿಇಒ ಆಗಿ ನೇಮಕವಾದಾಗಿನಿಂದ ಸತ್ಯ ನಾದೆಲ್ಲಾ ಅವರು ವಿಕಲಾಂಗ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ಗಮನ ಕೇಂದ್ರಿಕರಿಸಿದ್ದರು ಮತ್ತು ಪುತ್ರ ಜೈನ್​ ಬೆಳವಣಿಗೆಯನ್ನು ಸಹ ನೋಡಿಕೊಳ್ಳುತ್ತಿದ್ದರು.

ಕಳೆದ ವರ್ಷ, ಜೈನ್ ಅವರು ಹೆಚ್ಚಿನ ಚಿಕಿತ್ಸೆಯನ್ನು ಪಡೆದ ಮಕ್ಕಳ ಆಸ್ಪತ್ರೆ ಸಿಯಾಟಲ್​ನಲ್ಲಿರುವ ಚಿಲ್ಡ್ರನ್ಸ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಬ್ರೈನ್ ರಿಸರ್ಚ್‌ನ ಭಾಗವಾಗಿ ಪೀಡಿಯಾಟ್ರಿಕ್ ನ್ಯೂರೋಸೈನ್ಸ್‌ ವಿಭಾಗದಲ್ಲಿ ಜೈನ್ ನಾದೆಲ್ಲ ಎಂಡೋವ್ಡ್ ಚೇರ್ ಅನ್ನು ಸ್ಥಾಪಿಸಲು ಸತ್ಯ ನಾದೆಲ್ಲ ಅವರು ಕೈಜೋಡಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net