

ಪಾಲಾ: ಕೆನಡಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ನರ್ಸ್ ದುರಂತ ಸಾವಿಗೀಡಾಗಿದ್ದಾರೆ. ಮೃತರನ್ನು ಶಿಲ್ಪಾ ಬಾಬು (44) ಎಂದು ಗುರುತಿಸಲಾಗಿದೆ.
ಶಿಲ್ಪಾ ಬಾಬು ಅವರು ಕೇರಳದ ಪಾಲಾದ ಮರಿಯಪುರಂ ಮೂಲದವರು. ಶಿಲ್ಪಾ ಅವರು ಕೊಟ್ಟಾಯಂ ಚಾಝಿಕಟ್ಟು ಬಾಬು ಅವರ ಪುತ್ರಿ ಮತ್ತು ಡಾಕ್ಟರ್ ಅನಿಲ್ ಚಾಕೋ ಅವರ ಪತ್ನಿ.
ಕೆನಡಾದ ಸೌತ್ ಸರ್ರೆಯಲ್ಲಿ ಮೂರು ದಿನಗಳ ಹಿಂದೆ ನಡೆದ ಕಾರು ಅಪಘಾತದಲ್ಲಿ ಶಿಲ್ಪಾ ಗಾಯಗೊಂಡಿದ್ದರು. ಅವರು ತಮ್ಮ ಮಕ್ಕಳನ್ನು ಸಂಗೀತ ತರಗತಿಯಿಂದ ಕರೆತರಲು ಹೋಗುತ್ತಿದ್ದರು. ಈ ವೇಳೆ ಅವರ ಕಾರು ಅಪಘಾತಕ್ಕೀಡಾದ ತಕ್ಷಣ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಶಿಲ್ಪಾ ಅವರು ಕೆನಡಾದಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಪತಿ ಅನಿಲ್ ಚಾಕೊ ಕೆನಡಾದಲ್ಲಿ ವೈದ್ಯರಾಗಿದ್ದಾರೆ. ಅನಿಲ್ ಚಾಕೋ ಪಾಲಾ ಬ್ಲೂ ಮೂನ್ ಹೋಟೆಲ್ ಮಾಲೀಕ ಚಾಕೋಚನ್ ಅವರ ಪುತ್ರ. (ಏಜೆನ್ಸೀಸ್)