

ಭೋಪಾಲ್: ದೇಶಾದ್ಯಂತ ಪರ-ವಿರೋಧ ಚರ್ಚೆಗೆ ಕಾರಣವಾಗಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ "ದಿ ಕಾಶ್ಮೀರ್ ಫೈಲ್ಸ್" ಚಿತ್ರದ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿರುವ ಮಧ್ಯಪ್ರದೇಶದ ಐಎಸ್ಎಸ್ ಅಧಿಕಾರಿಗೆ ಸಂಕಷ್ಟ ಎದುರಾಗಿದೆ. ಅಧಿಕಾರಿಗೆ ನೋಟಿಸ್ ನೀಡುವುದಾಗಿ ಗೃಹ ಸಚಿವ ನಾರೋತ್ತಮ್ ಮಿಶ್ರಾ ಅವರು ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಧ್ಯಪ್ರದೇಶದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಆಗಿರುವ ಐಎಎಸ್ ಅಧಿಕಾರಿ ನಿಯಾಜ್ ಖಾನ್ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ನಿನ್ನೆ ಟ್ವೀಟ್ ಮಾಡಿದ್ದರು. ಅದರಲ್ಲಿ ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ನಡೆದ ಹೆಚ್ಚಿನ ಸಂಖ್ಯೆಯ ಮುಸ್ಲಿಮರ ಹತ್ಯೆಗಳ ಬಗ್ಗೆ ಸಿನಿಮಾ ಮಾಡಿ ಎಂದು ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕರನ್ನು ಒತ್ತಾಯಿಸಿದ್ದರು. ಅಲ್ಲದೆ, ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಕೀಟಗಳಲ್ಲ, ಅವರು ಕೂಡ ದೇಶದ ನಾಗರಿಕರು ಎಂದು ಆಕ್ರೋಶ ಹೊರಹಾಕಿದ್ದರು.
ಇದಾದ ಬಳಿಕ ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಕಾಶ್ಮೀರದಲ್ಲಿ ಮನೆಯನ್ನು ನಿರ್ಮಾಣ ಮಾಡಲು ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಬಂದ ಲಾಭದ ಹಣವನ್ನು ಅವರ ಖಾತೆಗಳಿಗೆ ವರ್ಗಾವಣೆ ಮಾಡಿ ಎಂದು ನಿಯಾಜ್ ಒತ್ತಾಯಿಸಿದ್ದರು. ಟ್ವೀಟ್ ವೈರಲ್ ಆಗುತ್ತಿದ್ದಂತೆ, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವಿವೇಕ್ ಅಗ್ನಿಹೋತ್ರಿ ಐಡಿಯಾಗಳನ್ನು ವಿನಿಮಯ ಮಾಡಿಕೊಳ್ಳಲು ನಿಯಾಜ್ ಬಳಿ ಸಮಯ ಕೇಳಿ ಟ್ವೀಟ್ ಮಾಡಿದ್ದರು.
ಇಷ್ಟೇ ಅಲ್ಲದೆ, "ಮುಸ್ಲಿಮರ ಹತ್ಯಾಕಾಂಡ"ವನ್ನು ಎತ್ತಿ ತೋರಿಸುವ ಪುಸ್ತಕವನ್ನು ಬರೆಯಲು ಯೋಜಿಸುತ್ತಿದ್ದೇನೆ ಎಂದು ನಿಯಾಜ್ ಖಾನ್ ಹೇಳಿದ್ದಾರೆ. ಇದರಿಂದಾಗಿ "ಅಲ್ಪಸಂಖ್ಯಾತರ ನೋವು ಮತ್ತು ಸಂಕಟ"ವನ್ನು ಭಾರತೀಯರ ಮುಂದೆ ತರಲು ಯಾರಾದರೂ "ದಿ ಕಾಶ್ಮೀರ್ ಫೈಲ್ಸ್" ನಂತಹ ಚಲನಚಿತ್ರವನ್ನು ನಿರ್ಮಿಸಲು ಸಹಾಯವಾಗಬಹುದು ಎಂದು ತಿಳಿಸಿದ್ದಾರೆ.
ಇನ್ನು ಈ ವಿಚಾರ ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ಸಾರಂಗ್ ಗಮನಕ್ಕೆ ಬಂದಿದ್ದು, ನಿಯಾಜ್ ಖಾನ್ ವಿರುದ್ಧ ಸಿಬ್ಬಂದಿ ಇಲಾಖೆಗೆ ಪತ್ರ ಬರೆಯುವುದಾಗಿ ಹೇಳಿದ್ದರು. ಐಎಎಸ್ ಅಧಿಕಾರಿ ಪಂಗಡವಾದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದೀಗ ಮಧ್ಯಪ್ರದೇಶ ಗೃಹ ಸಚಿವರು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಾನು ಖಾನ್ ಅವರ ಟ್ವೀಟ್ಗಳನ್ನು ನೋಡಿದ್ದೇನೆ. ಇದು ಗಂಭೀರ ವಿಷಯವಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರ ಅಳವಡಿಸಿದ್ದ ಮಿತಿಗಳನ್ನು ನಿಯಾಜ್ ಖಾನ್ ಮೀರಿದ್ದಾರೆ. ಅವರಿಗೆ ಸರ್ಕಾರ ಶೋಕಾಸ್ ನೋಟಿಸ್ ಹೊರಡಿಸಲಿದ್ದು, ಉತ್ತರವನ್ನು ಕೇಳಲಿದೆ ಎಂದಿದ್ದಾರೆ.
1990ರಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಮೇಲಿನ ಹತ್ಯಾಕಾಂಡವನ್ನು ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ವಿವೇಕ್ ಅಗ್ನಿಹೋತ್ರಿ ಚಿತ್ರಿಸಿದ್ದಾರೆ. ಈ ಸಿನಿಮಾವನ್ನು ಝೀ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಮಾರ್ಚ್ 11ರಂದು ಬಿಡುಗಡೆಯಾದ ಈ ಸಿನಿಮಾ ದೇಶದೆಲ್ಲೆಡೆ ಭಾರೀ ಸದ್ದು ಮಾಡಿದ್ದು, ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದೆ. (ಏಜೆನ್ಸೀಸ್)