ಚಪ್ಪಲಿ ವಿವಾದದ ಬಳಿಕ ನಯನತಾರಾಗೆ ಮತ್ತೊಂದು ಬಿಗ್​ ಶಾಕ್​: ಇನ್ನೊಂದು ಮಿಸ್ಟೇಕ್​ CCTVಯಲ್ಲಿ ಸೆರೆ

Nayana
Published on

ತಿರುಪತಿ: ತಾರಾದಂಪತಿ ನಯನತಾರಾ-ವಿಘ್ನೇಶ್​ ಶಿವನ್​ ಮದುವೆಯಾದ ಮರುದಿನವೇ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದಿದ್ದಾರೆ. ಆದರೆ, ತಾವು ಮಾಡಿಕೊಂಡ ಎಡವಟ್ಟಿನಿಂದ ಇದೀಗ ನಯನಾ ಮತ್ತು ವಿಘ್ನೇಶ್​ಗೆ ಸಂಕಷ್ಟವೊಂದು ಎದುರಾಗಿದೆ.

ಹೌದು. ತಿರುಪತಿಯ ಭೇಟಿ ವೇಳೆ ನಯನತಾರಾ ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಹಾಕಿಕೊಂಡೇ ಓಡಾಡಿದ್ದಾರೆ. ಇದು ಭಕ್ತರ ಆಕ್ರೋಶಕ್ಕೆ ಗುರಿಯಾಗಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ತಾರಾದಂಪತಿ ಕ್ಷಮೆ ಕೂಡ ಕೇಳಿದ್ದಾರೆ. ಆದರೆ, ಈ ಪ್ರಕರಣ ಇಲ್ಲಿಗೆ ಕೊನೆಯಾಗುವ ರೀತಿ ಕಾಣುತ್ತಿಲ್ಲ. ಏಕೆಂದರೆ, ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ (ಟಿಟಿಡಿ) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಲೀಗಲ್​ ನೋಟಿಸ್​ ನೀಡಲು ಮುಂದಾಗಿದೆ.

ಅಂದಹಾಗೆ, ಏಳು ವರ್ಷಗಳ ಡೇಟಿಂಗ್​ ನಂತರ ಲೇಡಿ ಸೂಪರ್​ ಸ್ಟಾರ್​ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್​ ಶಿವನ್​ ತಮ್ಮಿಬ್ಬರ ಸಂಬಂಧಕ್ಕೆ ವಿವಾಹದ ಮೂಲಕ ಅಧಿಕೃತ ಮುದ್ರೆ ಒತ್ತಿದ್ದಾರೆ. ಜೂನ್​ 9ರಂದು ಮಹಾಬಲಿಪುರಂನ ಖಾಸಗಿ ರೆಸಾರ್ಟ್​ ಒಂದರಲ್ಲಿ ಇಬ್ಬರು ಕುಟುಂಬದ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದಾರೆ. ಮದುವೆಯಾದ ಮಾರನೇ ದಿನ ಅಂದರೆ ಶುಕ್ರವಾರ ದಂಪತಿ ತಿರುಪತಿಗೆ ಭೇಟಿ ನೀಡಿದ್ದರು. ಈ ವೇಳೆ ನಯನಾ ಕಾಲಲ್ಲಿ ಚಪ್ಪಲಿ ಇರುವುದನ್ನು ಕಂಡು ಭಕ್ತರು ಆಕ್ರೋಶ ಹೊರಹಾಕಿದ್ದರು. ಅಲ್ಲದೆ, ಇದು ಭಾರೀ ವಿವಾದವನ್ನು ಸೃಷ್ಟಿಸಿದೆ.

ತಿರುಮಲ ತಿರುಪತಿ ದೇವಸ್ಥಾನಂ ಬೋರ್ಡ್‌ನ ಮುಖ್ಯ ವಿಜಿಲೆನ್ಸ್ ಸೆಕ್ಯುರಿಟಿ ಆಫೀಸರ್ ನರಸಿಂಹ ಕಿಶೋರ್ ಮಾತನಾಡಿದ್ದು, ಭೇಟಿ ವೇಳೆ ನಯನತಾರಾ ದೇವಸ್ಥಾನದ ಎರಡು ಪ್ರಮುಖ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದ್ದು, ಅದಕ್ಕಾಗಿಯೇ ಅವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗುತ್ತಿದೆ ಎಂದಿದ್ದಾರೆ.

ದರ್ಶನದ ವೇಳೆ ನಯನತಾರಾ ದೇವಸ್ಥಾನದ ಬಹುಮುಖ್ಯ ಭಾಗವಾದ ಮಾತಾ ಬೀದಿಯಲ್ಲಿ ಚಪ್ಪಲಿ ಧರಿಸಿ ತೆರಳುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಭೇಟಿಯ ಸಂದರ್ಭದಲ್ಲಿ ತಮ್ಮದೇ ಛಾಯಾಗ್ರಾಹಕರನ್ನು ಪಕ್ಕದಲ್ಲಿ ಇರಿಸಿಕೊಂಡು ಫೋಟೋ ತೆಗೆಸಿದ್ದು, ಎರಡನೇ ಅಪರಾಧವಾಗಿದೆ. ದೇವಸ್ಥಾನದ ನಿಯಮಗಳ ಪ್ರಕಾರ ಖಾಸಗಿ ಛಾಯಾಗ್ರಾಹಕರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ. ಆದರೆ, ಎರಡು ನಿಯಮಗಳನ್ನು ನಯನಾ ಉಲ್ಲಂಘನೆ ಮಾಡಿದ್ದಾರೆಂದು ಕಿಶೋರ್​ ಹೇಳಿದ್ದಾರೆ.

ನಯನತಾರಾ ಪಾದರಕ್ಷೆಗಳೊಂದಿಗೆ ಬೀದಿ ಬೀದಿಗಳಲ್ಲಿ ಓಡಾಡುತ್ತಿರುವ ಹಾಗೂ ಖಾಸಗಿ ಛಾಯಾಗ್ರಾಹಕರೊಂದಿಗೆ ಫೋಟೋಶೂಟ್‌ಗೆ ಪೋಸ್ ನೀಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ತಮ್ಮ ಬಳಿ ಇವೆ. ಈ ಬಗ್ಗೆ ವಿಘ್ನೇಶ್​ ಜತೆ ಮಾತನಾಡಿದೆ. ಎಲ್ಲರ ಬಳಿ ಕ್ಷಮೆಯಾಚಿಸುವ ವೀಡಿಯೊವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು. ಆದರೂ, ನಯನತಾರಾಗೆ ಲೀಗಲ್ ನೋಟಿಸ್ ಕಳುಹಿಸುವುದಾಗಿ ಕಿಶೋರ್​ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net