ಚಕ್ರಕ್ಕೆ ಚಾಕು ಕಟ್ಟಿ ಕೇಕ್ ಕತ್ತರಿಸುವ ಮೂಲಕ ಪ್ರೀತಿಯ ಬೈಕ್​ಗೆ ಹುಟ್ಟುಹಬ್ಬ ಆಚರಿಸಿದ ವಿದ್ಯಾರ್ಥಿ!

Bike lover
Published on

ಕೊಪ್ಪಳ: ಪ್ರತಿಯೊಬ್ಬರಿಗೂ ಒಂದೊಂದು ವಸ್ತುಗಳ ಮೇಲೆ ತುಂಬಾ ಪ್ರೀತಿ ಇರುತ್ತದೆ. ಅದರಲ್ಲೂ ಕೆಲವರಿಗಂತೂ ಅವರು ಇಷ್ಟಪಡುವ ವಸ್ತುಗಳ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿರುತ್ತಾರೆ. ಅಂತಹ ವಸ್ತುಗಳ ಮೇಲಿನ ತಮ್ಮ ಅಭಿಮಾನವನ್ನು ಬಹಳ ವಿಭಿನ್ನವಾಗಿ ತೋರಿಸಿಕೊಳ್ಳುತ್ತಾರೆ. ಆ ಸಾಲಿಗೆ ಕೊಪ್ಪಳ ವಿದ್ಯಾರ್ಥಿಯೊಬ್ಬ ಸೇರಿಕೊಂಡಿದ್ದಾನೆ.

ಬೈಕ್ ಮೇಲೆ ತುಂಬಾ ಕ್ರೇಜ್​ ಹೊಂದಿರುವ ಕೊಪ್ಪಳದ ಗಂಗಾವತಿ ಮೂಲದ ವಿದ್ಯಾರ್ಥಿ, ಬೈಕ್​ಗೆ ಹುಟ್ಟು ಹಬ್ಬ ಆಚರಣೆ ಮಾಡುವ ಮೂಲಕ ವಿಶೇಷ ಅಭಿಮಾನ ಮೆರೆದಿದ್ದಾನೆ. ಗಮನಾರ್ಹವೆಂದರೆ, ಬೈಕ್‌ನಿಂದಲೇ ಕೇಕ್​ ಕತ್ತರಿಸಿದ್ದಾನೆ.

ವಿದ್ಯಾರ್ಥಿಯ ಹೆಸರು ವೀರೇಶ್. ಈತನಿಗೆ ಬೈಕ್​ ಅಂದರೆ ತುಂಬಾ ಇಷ್ಟ. 50 ಸಾವಿರ ರೂಪಾಯಿ ಕೊಟ್ಟು ಒಂದು ವರ್ಷದ ಹಿಂದೆ ಬೈಕ್ ಖರೀದಿ ಮಾಡಿದ್ದ. ಇದೀಗ ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೈಕ್​ಗೆ ಹುಟ್ಟುಹಬ್ಬ ಆಚರಣೆ ಮಾಡಿದ್ದಾನೆ.

ಪ್ಯಾರಾ ಮೆಡಿಕಲ್ ಕೋರ್ಸ್ ಓದುತ್ತಿರುವ ವೀರೇಶ್​, ತನ್ನ ಸೆಕೆಂಡ್ ಹ್ಯಾಂಡ್ ಬೈಕ್‌ಗೆ ಡಾರ್ಲಿಂಗ್ ಅಂತ ನಾಮಕರಣ ಮಾಡಿದ್ದಾನೆ. ಬೈಕ್ ಚಕ್ರಕ್ಕೆ ಚಾಕು ಕಟ್ಟಿ ಕೇಕ್ ಕತ್ತರಿಸಿ, ಹೆಡ್​ಲೈಟ್​ಗೆ ಕೇಕ್​ ಬಳಿದು ಸಂಭ್ರಮಿದ್ದಾನೆ. ಇದಾದ ಬಳಿಕ ಒಂದು ಜಾಲಿ ರೈಡ್​ ಹೋಗಿ ಎಂಜಾಯ್​ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net