ದುಬೈನಲ್ಲಿ ಐಷಾರಾಮಿ ಜೀವನ: ದಿಢೀರ್ ದಿವಾಳಿಯಾಗಿ ಬೀದಿ ಸುತ್ತುತ್ತಿದ್ದ ಕೇರಳ ಮಹಿಳೆ ಇದೀಗ ಸುರಕ್ಷಿತ!

Kerala Woman
Published on

ಶಾರ್ಜಾ: ಒಂದು ಕಾಲದಲ್ಲಿ ಐಷಾರಾಮಿ ಬಂಗಲೆಯಲ್ಲಿ ಜೀವಿಸುತ್ತಾ ಎಲ್ಲ ಶ್ರೀಮಂತಿಕೆಯನ್ನು ಆನಂದಿಸುತ್ತಿದ್ದ ಕೇರಳದ ಆಲಪ್ಪುಳ ಜಿಲ್ಲೆಯ ಕಂದಲ್ಲೂರು ಮೂಲದ ಉದ್ಯಮಿ ಅನಿತಾ ಬಾಲು ಅವರ ಜೀವನವು ದುರಂತ ಸಿನಿಮಾ ಕತೆಯೆಂತೆಯೇ ದಿಢೀರ್ ತಿರುವು ಪಡೆದುಕೊಂಡು ದುಬೈನ ಮರವೊಂದರ ಕೆಳಗೆ ಯಾರು ಗತಿಯಿಲ್ಲದಂತೆ ದಿನ ದೂಡುತ್ತಿದ್ದಾರೆ. ಆದರೆ, ಇದೀಗ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ನಂಬಲಾರ್ಹ ಮೂಲಗಳಿಂದ ತಿಳಿದುಬಂದಿದೆ.

ಅನಿತಾಳ ತಂದೆ ಇಸ್ರೋದಲ್ಲಿ ಉದ್ಯೋಗಿಯಾಗಿದ್ದರು. ಸ್ವಯಂ ನಿವೃತ್ತಿ ತೆಗೆದುಕೊಂಡು ದುಬೈಗೆ ತೆರಳಿ ಕಂಪನಿಯೊಂದನ್ನು ಸ್ಥಾಪಿಸಿದರು. ಇಡೀ ಕುಟುಂಬ ದುಬೈನಲ್ಲೇ ನೆಲೆಸಿತ್ತು. ಇದಾದ ಬಳಿಕ ಆಲಪ್ಪುಳದ ಮುತ್ತುಕುಲಮ್​ ಮೂಲದ ಬಾಲು ಎಂಬುವರನ್ನು ಅನಿತಾ ಮದುವೆಯಾದರು. ಸುಮಾರು 20 ವರ್ಷದಿಂದ ಅನಿತಾ ಕುಟುಂಬ ಯುಎಇನಲ್ಲಿ ನೆಲೆಸಿದೆ. ಇದರ ನಡುವೆ ಅನಿತಾ ತಂದೆ ಕೇರಳಕ್ಕೆ ಹಿಂತಿರುಗಿದಾಗ, ಅನಿತಾ ಮತ್ತು ಆಕೆಯ ಪತಿ ಸೇರಿಕೊಂಡು ಎಲೆಕ್ಟ್ರೋ ಮೆಕ್ಯಾನಿಕಲ್ ಕಂಪನಿಯೊಂದನ್ನು ಸ್ಥಾಪಿಸಿದರು. ಸುಮಾರು 2000 ಮಂದಿಗೆ ಉದ್ಯೋಗ ನೀಡಿದ್ದರು. ಆರಂಭದಲ್ಲಿ ಅದೃಷ್ಟ ಚೆನ್ನಾಗಿಯೇ ಇತ್ತು. ಯಾವುದೇ ಅಡೆ-ತಡೆಯಿಲ್ಲದೇ ಕಂಪನಿ ಉತ್ತಮವಾಗಿ ಸಾಗುತ್ತಿತ್ತು. ಒಳ್ಳೆಯ ಆದಾಯವೂ ಬರುತ್ತಿತ್ತ. ಆದರೆ, ಕೆಲವೇ ವರ್ಷಗಳಲ್ಲಿ ಅವರ ಕೆಟ್ಟ ದಿನಗಳು ಆರಂಭವಾಗಲು ಶುರುವಾಯಿತು.

ಮೂಲಗಳ ಪ್ರಕಾರ ಅನಿತಾ ಪತಿ ಬಾಲು ಯುಎಇ ಬ್ಯಾಂಕ್​ನಿಂದ ಸಾಲ ತೆಗೆದುಕೊಂಡಿದ್ದ. ಅದನ್ನು ಹಿಂತಿರುಗಿಸಲು ಆಗಿರಲಿಲ್ಲ. ನಾನು ಶ್ಯೂರಿಟಿಗೆ ಸಹಿ ಹಾಕಿರಲಿಲ್ಲ ಎಂದು ಅನಿತಾ ಹೇಳಿಕೊಂಡಿದ್ದಾರೆ. ಆದರೆ, ಗಂಡ ಕೇರಳಕ್ಕೆ ಮರಳಿ ಮತ್ತೆ ಹಿಂತಿರುಗದಿದ್ದಕ್ಕೆ ಅನಿತಾ ಮೇಲೆ ಪ್ರಕರಣ ದಾಖಲಾಗುತ್ತದೆ. ಅಲ್ಲದೆ, ಜೈಲು ಶಿಕ್ಷೆಗೆ ಗುರಿಯಾಗಿ, ದುಬೈನ ಅವಿರ್​ ಮತ್ತು ಶಾರ್ಜಾದಲ್ಲಿನ ಜೈಲಲ್ಲಿ ಕೆಲವು ವರ್ಷ ಶಿಕ್ಷೆ ಅನುಭವಿಸುತ್ತಾರೆ.

ಅನಿತಾ ಮೂರು ವರ್ಷಗಳ ಬಳಿಕ ಬಿಡುಗಡೆಯಾಗಿದ್ದಾರೆ. ಇತ್ತ ಆಕೆಯ ಪಾಸ್‌ಪೋರ್ಟ್ ಮತ್ತು ವೀಸಾ ಅವಧಿ ಕೂಡ ಮುಗಿದಿದೆ ಮತ್ತು ಸಿವಿಲ್ ಪ್ರಕರಣದಿಂದಾಗಿ ಅವಳು ಪ್ರಯಾಣ ನಿಷೇಧವನ್ನು ಎದುರಿಸುತ್ತಿದ್ದಾರೆ. ಇದನ್ನು ಗಮನಿಸಿರುವ ದುಬೈನಲ್ಲಿ ವಾಸವಿರುವ ಕೇರಳಿಗರು ಆಕೆಯ ನೆರವಿಗೆ ಬಂದಿದ್ದು, ಪಾಸ್​ ಮರಳಿ ಕೊಡಿಸುವ ಯತ್ನಗಳು ನಡೆಯುತ್ತಿದೆ.

ಅಂದಹಾಗೆ ಅನಿತಾ, ಐಷಾರಾಮಿ ಜೀವನ ನಡೆಸುತ್ತಿದ್ದರು. ದುಬೈ, ಶಾರ್ಜಾ ಮತ್ತು ರಾಸ್​ ಅಲ್​ ಖೈಮಾದಲ್ಲಿ ಅನಿತಾ ಅವರು ಆಧುನಿಕ ಕಚೇರಿಯನ್ನು ಹೊಂದಿದ್ದರು. ಐಷಾರಾಮಿ ಬಂಗಲೆ ಮತ್ತು ಲಕ್ಷುರಿ ಕಾರುಗಳಿದ್ದವು ಮತ್ತು ತವರಿನಲ್ಲೂ ಅನಿತಾ ಅವರಿಗೆ ತುಂಬಾ ಆಸ್ತಿಗಳಿವೆ. ಆದರೆ, ಕಣ್ಣು ಮಿಟುಕಿಸುವಷ್ಟರಲ್ಲಿ ದುರಂತಕ್ಕೆ ಸಿಲುಕಿದ ಅನಿತಾ, ಧುತ್ತನೇ ಶ್ರೀಮಂತಿಕೆಯಿಂದ ಕಳಗೆ ಬಿದ್ದಿದ್ದಾರೆ.

ಅನಿತಾ ದುಬೈನ ದೇವಸ್ಥಾನವೊಂದರ ಬಳಿಯಿರುವ ಬೇವಿನ ಮರದ ಅಡಿಯಲ್ಲಿ ಕಳೆದ ಒಂದು ತಿಂಗಳಿಂದ ಬದುಕು ಸಾಗಿಸುತ್ತಿದ್ದರು. ಆರಂಭದಲ್ಲಿ ಯಾರೇ ಸಹಾಯ ಮಾಡಲು ಮುಂದೆ ಬಂದರೂ ಅದನ್ನು ನಿರಾಕರಿಸುತ್ತಿದ್ದರು. ಅನಿತಾಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಓರ್ವ ದುಬೈನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೊಬ್ಬ ಕೇರಳದಲ್ಲಿದ್ದಾರೆ. ದುಬೈನಲ್ಲಿ ವಾಸಿಸುವ ಮಗ ಕೆಲವೊಮ್ಮೆ ತಾಯಿಯನ್ನು ಭೇಟಿ ಮಾಡುತ್ತಾನೆ. ಆದರೆ. ಆಕೆ ಅವನಿಂದ ಯಾವುದೇ ಹಣಕಾಸಿನ ಸಹಾಯವನ್ನು ಪಡೆಯಲು ನಿರಾಕರಿಸುತ್ತಿದ್ದರು. ಅಲ್ಲದೆ, ಮನೆಗೆ ಹೋಗಲು ಒಪ್ಪುತ್ತಿರಲಿಲ್ಲ. ಇದೀಗ ಮನಸ್ಸು ಬದಲಿಸಿರುವ ಅನಿತಾ, ಸುರಕ್ಷಿತ ತಾಣಕ್ಕೆ ಸ್ಥಳಾಂತರವಾಗಿದ್ದಾರೆ. ಆದಷ್ಟು ಬೇಗ ಅವರು ಸಹಜ ಜೀವನಕ್ಕೆ ಬರುವ ನಂಬಿಕೆ ಇದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ದುಬೈ ಪದಾಧಿಕಾರಿ ಶಿಜು ಬಶೀರ್ ಅವರು ಪ್ರಕರಣವನ್ನು ಇತ್ಯರ್ಥಗೊಳಿಸಲು ಮತ್ತು ಆಕೆಗೆ ನಿವಾಸದ ದಾಖಲೆಗಳನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದು, ಆಕೆಗೆ ಕೆಲಸ ಮಾಡಲು ಮತ್ತು ಯೋಗ್ಯವಾಗಿ ಬದುಕಲು ಅನುವು ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net