ಭಾರತದ ಅತ್ಯಂತ ಕೆಟ್ಟ ಭಾಷೆ ಕನ್ನಡವಂತೆ! ಕನ್ನಡಿಗರ ಸ್ವಾಭಿಮಾನ ಕೆಣಕಿದವರ ವಿರುದ್ಧ ಧ್ವನಿ ಎತ್ತಲೇಬೇಕಿದೆ

Kannada 111
Published on

ಬೆಂಗಳೂರು: ಇಡೀ ದೇಶದಲ್ಲೇ ತುಂಬಾ ಅನ್ಯಾಯ ಹಾಗೂ ತುಳಿತಕ್ಕೆ ಒಳಗಾಗುತ್ತಿರುವ ಭಾಷೆ ಎಂದರೆ ಅದು ಕನ್ನಡ ಎಂಬುದರಲ್ಲಿ ಸಂಶಯವೇ ಇಲ್ಲ. ಸದಾ ಒಬ್ಬರಲ್ಲ ಒಬ್ಬೊಬ್ಬರು ನಮ್ಮ ವಿರುದ್ಧ ತಗಾದೆ ತೆಗೆಯುತ್ತಲೇ ಇರುತ್ತಾರೆ. ಹೀಗಾಗಿಯೇ ನಮ್ಮ ಕನ್ನಡ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಇದೆ.

ಇದೀಗ ಗೂಗಲ್​ನಿಂದಲೂ ನಮ್ಮ ಕನ್ನಡ ಭಾಷೆಗೆ ಬಹುದೊಡ್ಡ ಅವಮಾನವಾಗಿದೆ. ಕನ್ನಡ ಭಾಷಾಭಿಮಾನಿಗಳ ಮನಸ್ಸಿಗೆ ತೀವ್ರ ನೋವುಂಟು ಮಾಡುವಂತಹ ಹಾಗೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ವಿಚಾರವೊಂದು ಗೂಗಲ್​ನಲ್ಲಿ ಬೆಳಕಿಗೆ ಬಂದಿದೆ.

ಭಾರತದ ಅತ್ಯಂತ ಕೆಟ್ಟ ಭಾಷೆ ಯಾವುದು ಎಂಬ ಪ್ರಶ್ನೆಗೆ ಗೂಗಲ್​ನಲ್ಲಿ ಕನ್ನಡ ಎಂಬ ಉತ್ತರ ಬರುತ್ತಿದೆ. ಇದು ಕನ್ನಡಿಗರ ಸ್ವಾಭಿಮಾನವನ್ನು ಕೆಣಕ್ಕಿದ್ದು, ಇದರ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ. ಇಲ್ಲವಾದಲ್ಲಿ ಕನ್ನಡ ಭಾಷೆ ಇನ್ನು ಹೆಚ್ಚು ಶೋಷಣೆಗೆ ಒಳಗಾಗಲಿದೆ. ಈಗಾಗಲೇ ಪರಕೀಯ ಭಾಷಿಗರಿಂದಲೂ ಕನ್ನಡಕ್ಕೆ ತುಂಬಾ ಅನ್ಯಾಯವಾಗುತ್ತಿದೆ.

ಕನ್ನಡಿಗರ ಸಹನೆ, ತಾಳ್ಮೆಯನ್ನು ಅನೇಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಕನ್ನಡ ಭಾಷೆಯ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ನಮ್ಮ ನೆಲದಲ್ಲೇ ಇದ್ದುಕೊಂಡು ಕನ್ನಡ ಭಾಷೆಗೆ ದ್ರೋಹ ಬಗೆಯುವವರ ಸಂಖ್ಯೆಯು ಹೆಚ್ಚಾಗುತ್ತಿದ್ದು, ಇದನ್ನೆಲ್ಲ ನೋಡಿಕೊಂಡು ಪ್ರಶ್ನಿಸದೇ ಸುಮ್ಮನಾದರೆ ಮುಂದೊಂದಿನ ಕನ್ನಡ ಭಾಷೆಯ ಉಳಿವಿಗೆ ಕಂಟಕ ಎದುರಾಗುವುದು ಖಚಿತ.

ಗೂಗಲ್​ನಲ್ಲಿ ವರದಿ ಮಾಡಿ

ಗೂಗಲ್​ನಲ್ಲಿ ಕನ್ನಡ ವಿರುದ್ಧ ಪ್ರಕಟವಾಗಿರುವ ವರದಿಯ ವಿರುದ್ಧ ಫೀಡ್​ಬ್ಯಾಕ್​ ನೀಡುವ ಮೂಲಕ ಎಚ್ಚರ ನೀಡಿ. ಅದಕ್ಕಾಗಿ ಮಾಡಬೇಕಾಗಿರುವುದಿಷ್ಟೇ, ಫೀಡ್​ಬ್ಯಾಕ್​ ಹೆಸರಿನ ಲಿಂಕ್​ ಮೇಲೆ ಕ್ಲಿಕ್ಕಿಸಿ ವರದಿಯು ದ್ವೇಷಪೂರಿತ ಮತ್ತು ಜನಾಂಗೀಯ ನಿಂದನೆಯಾಗಿದೆ ಎಂಬ ಆಯ್ಕೆ ಮೇಲೆ ಕ್ಲಿಕ್ಕಿಸಿ ಗೂಗಲ್​ಗೆ ವರದಿ ಮಾಡಿ. ಹೆಚ್ಚಿನ ಸಂಖ್ಯೆಯಲ್ಲಿ ವರದಿ ಮಾಡಿದಷ್ಟು ಗೂಗಲ್​ ಆ ಬಗ್ಗೆ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net