

ಬೆಂಗಳೂರು: ಸ್ಯಾಂಡಲ್ವುಡ್ನ ಬಹುನಿರೀಕ್ಷಿತ "ವಿಕ್ರಾಂತ್ ರೋಣ" ಸಿನಿಮಾ ಬಗ್ಗೆ ಚಿತ್ರತಂಡದಿಂದ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಹೊರ ಬೀಳುತ್ತಲೇ ಇದೆ. ಇತ್ತೀಚೆಗಷ್ಟೇ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಚಿತ್ರತಂಡವನ್ನು ಸೇರಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು, ಇದೀಗ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದ ಮತ್ತೊಂದು ಬಿಗ್ ಸರ್ಪ್ರೈಸ್ ಹೊರಬಿದ್ದಿದೆ.
ಶ್ರೀಲಂಕನ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಚಿತ್ರದಲ್ಲಿ ಕೇವಲ ಐಟಂ ಸಾಂಗ್ ಮಾತ್ರವಲ್ಲದೇ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂಬ ಸುದ್ದಿ ಬಹುದಿನಗಳ ಹಿಂದೆಯೇ ಹೊರಬಿದ್ದಿದೆ. ಐಟಂ ಸಾಂಗ್ ಚಿತ್ರೀಕರಣ ಸಮಯದಲ್ಲಿ ಜಾಕ್ವೆಲಿನ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಅನೂಪ್ ಭಂಡಾರಿ ಅವರು ಹೇಳಿದ್ದರು. ಅದರಂತೆ ಜುಲೈ 31ಕ್ಕೆ ದಿನಾಂಕ ಸಹ ನಿಗದಿಯಾಗಿತ್ತು. ಹೇಳಿದಂತೆಯೇ ಇಂದು ಜಾಕ್ವೆಲಿನ್ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಚಿತ್ರದಲ್ಲಿ ಜಾಕ್ವೆಲಿನ್ ಅವರ ಪಾತ್ರದ ಹೆಸರು "ಗಡಂಗ್ ರಕ್ಕಮ" . ಫಸ್ಟ್ ಲುಕ್ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಅಜನೀಶ್ ಲೋಕನಾಥ್ ಅವರ ಬ್ಯಾಕ್ಗ್ರೌಂಡ್ ಮ್ಯೂಸಿಕ್ಗೆ ಫಿದಾ ಆಗೋದು ಗ್ಯಾರೆಂಟಿ. ಪೋಸ್ಟರ್ ಡಿಸೈನ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಜಾಕ್ವೆಲಿನ್ ಎಂಟ್ರಿಯು ಚಿತ್ರಕ್ಕೆ ಮತ್ತಷ್ಟು ಬೂಸ್ಟ್ ನೀಡುವುದು ಖಚಿತವಾಗಿದೆ.
ಟ್ರೆಂಡಿಂಗ್ನಲ್ಲಿ ವಿಕ್ರಾಂತ್ ರೋಣ
ಜಾಕ್ವೆಲಿನ್ ಫರ್ನಾಂಡಿಸ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಂತೆ ಟ್ವಿಟರ್ನಲ್ಲಿ ವಿಕ್ರಾಂತ್ ರೋಣನ ಆರ್ಭಟ ಶುರುವಾರಿದೆ. #JacquelineVikrantRonaLook ಎಂಬ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ನಂಬರ್ 1 ಟ್ರೆಂಡಿಂಗ್ನಲ್ಲಿದ್ದು, ಜಾಕ್ವೆಲಿನ್ ಲುಕ್ಗೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.
ಚಿತ್ರವನ್ನು ರಂಗಿತರಂಗ ಖ್ಯಾತಿ ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳವನ್ನು ಹೂಡಿದ್ದಾರೆ. ಕರೊನಾ ಎರಡನೇ ಅಲೆ ಬರದೇ ಹೋಗಿದ್ದರೆ ಮುಂದಿನ ತಿಂಗಳು ಅಂದರೆ ಆಗಸ್ಟ್ 19ರಂದು ಚಿತ್ರ ತೆರೆಕಾಣಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಇನ್ನು ಮುಚ್ಚಿರುವ ಕಾರಣ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಲಿದೆ.