ಆಕ್ಸಿಜನ್​ ಭರ್ತಿಗೆ ಕ್ಯೂನಲ್ಲಿ ನಿಂತಿದ್ದ ವೇಳೆ ಬಂತು ಫೋನ್​ ಕರೆ: ಮಾತು ಕೇಳ್ತಿದ್ದಂತೆ ಕುಸಿದು ಬಿದ್ದ ಮಹಿಳೆ

Delhi Woman
Published on

ನವದೆಹಲಿ: ಖಾಲಿಯಾಗಿದ್ದ ಆಕ್ಸಿಜನ್​ ಸಿಲಿಂಡರ್​ ಅನ್ನು ಮರುಭರ್ತಿ ಮಾಡಿಸಿಕೊಳ್ಳಲು ಸಾಕಷ್ಟು ಅಲೆದಾಡಿದ ಮಹಿಳೆಯೊಬ್ಬರು ಸಿಕ್ಕ ಸಿಕ್ಕವರನ್ನು ಬೇಡಿಕೊಂಡರು ತನ್ನ ಪ್ರಯತ್ನ ಮಾತ್ರ ಫಲ ಕಾಣಲೇ ಇಲ್ಲ. ಆಕ್ಸಿಜನ್​ ಹುಡುಕಾಟದ ನಡುವೆಯೇ ಆಕೆಯ ತಾಯಿ ಕೋವಿಡ್​ನಿಂದ ಮೃತಪಟ್ಟಿದ್ದು, ಮನಕಲಕುವಂತಿತ್ತು.

ಮಹಾಮಾರಿ ಕರೊನಾ ಎರಡನೇ ಅಲೆ ದೇಶಾದ್ಯಂತ ಅಟ್ಟಹಾಸ ಮೆರೆಯುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಆಕ್ಸಿಜನ್​ ಕೊರತೆಯು ಸಾಕಷ್ಟು ಸಾವುಗಳಿಗೆ ಕಾರಣವಾಗುತ್ತಿದೆ. ತಮ್ಮ ಕುಟುಂಬಸ್ಥರನ್ನು ಉಳಿಸಿಕೊಳ್ಳುವ ಜನರು ಪ್ರಯತ್ನವು ಕೊನೆಗೆ ಆಕ್ಸಿಜನ್​ ಕೊರತೆಯಿಂದ ವಿಫಲವಾಗುತ್ತಿದೆ.

ಶ್ರುತಿ ಸಹಾ ಎಂಬುವರು ರಾಜಧಾನಿಯ ಕೈಗಾರಿಕಾ ಎಸ್ಟೇಟ್​ನಲ್ಲಿರುವ ಆಕ್ಸಿಜನ್​ ಮರುಭರ್ತಿ ಘಟಕದ ಹೊರಗೆ ಕಾಯುತ್ತಿದ್ದಾಗ, ತಡವಾಗುತ್ತಿದ್ದಂತೆ ಕಂಗಾಲಾದ ಸಹಾ, ಘಟಕವನ್ನು ತೆರೆಯುವಂತೆ ಕಾಲಿಗೆ ಬಿದ್ದು ಕೇಳಿಕೊಂಡಳು. ಆದರೆ, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಕಾಯುವಂತೆ ಹೇಳಿದರು.

ಆದರೆ, ಸಮಯ ಮಾತ್ರ ಆಗುತ್ತಲೇ ಇತ್ತು. ಆದರೂ, ಸಹಾ ಕ್ಯೂನಲ್ಲಿ ಕಾಯುತ್ತಲೇ ನಿಂತಿದ್ದರು. ಈ ಮಧ್ಯೆ ಮನೆಯಿಂದ ಫೋನ್​ ಕರೆ ಒಂದು ಬಂದಿತು. ಫೋನ್​ ಕಾಲ್​ ರಿಸೀವ್​ ಮಾಡಿ ಮಾತನಾಡಿದ ಸಹಾಗೆ ಶಾಕ್​ ಆಯಿತು. ಆಕ್ಸಿಜನ್​ ಇಲ್ಲದೆ, ಆಕೆಯ ತಾಯಿ ಒದ್ದಾಡಿ ಅಷ್ಟರಲ್ಲಾಗಲೇ ಪ್ರಾಣವನ್ನು ಬಿಟ್ಟಿದ್ದರು.

ಈ ಸುದ್ದಿ ಕೇಳಿದ ಸಹಾ ತಕ್ಷಣ ಅಲ್ಲಿಯೇ ಕುಸಿದುಬಿದ್ದಳು. ಸುತ್ತಮುತ್ತಲಿದ್ದ ಮಂದಿ ಆಕೆಯನ್ನು ಎಚ್ಚರಿಸುವ ಪ್ರಯತ್ನ ಮಾಡಿದರು. ಎಚ್ಚರಗೊಂಡ ಸಹಾ ಖಾಲಿ ಆಕ್ಸಿಜನ್​ ಸಿಲಿಂಡರ್​ ಅಲ್ಲಿಯೇ ಬಿಟ್ಟು, ಮನೆಗೆ ಓಡಿದಳು.

ಈ ಬಗ್ಗೆ ಮಾತನಾಡಿರುವ ಸಹಾ, ಬೆಳಗ್ಗೆ 2 ಗಂಟೆಯಿಂದ ಆಕ್ಸಿಜನ್​ಗಾಗಿ ಹೊರಗಡೆಯೇ ಹುಡುಕಾಡುತ್ತಿದ್ದೇನೆ. ದೆಹಲಿಯ ಯಾವ ಭಾಗದಲ್ಲೂ ಆಕ್ಸಿಜನ್​ ಇಲ್ಲ. ಕೊನೆಗೆ ಕೈಗಾರಿಕಾ ಎಸ್ಟೇಟ್​ನಲ್ಲಿರುವ ಆಕ್ಸಿಜನ್​ ಮರುಭರ್ತಿ ಘಟಕದ ಬಳಿ ಹೋದೆವು. ನನ್ನ ತಾಯಿ ಸ್ಥಿತಿ ಗಂಭೀರವಾಗಿದೆ. ದಯವಿಟ್ಟು ಆಕ್ಸಿಜನ್​ ತುಂಬಿಕೊಡಿ ಎಂದು ಕೇಳಿಕೊಂಡರು ಅವರ ಮನಸ್ಸು ಕರಗಲಿಲ್ಲ ಎಂದು ಹೇಳುತ್ತಾ ಸಹಾ ಕಣ್ಣೀರಾಕಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net