ಬೆಂಗಳೂರು: ಹುಬ್ಬಳ್ಳಿಯಲ್ಲಿ ತಡರಾತ್ರಿ ನಡೆದ ಕಹಿ ಘಟನೆಗಳು ಕರ್ನಾಟಕದ ಶಾಂತಿ, ಸಾಮರಸ್ಯ ಹಾಳು ಮಾಡುವ ದುಷ್ಪ್ರಯತ್ನಗಳು. ಧರ್ಮ ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಈದ್ಗಾ ಮೈದಾನದ ವಿವಾದಕ್ಕೆ ತೆರೆಬಿದ್ದ ನಂತರ ನೆಮ್ಮದಿಯಾಗಿದ್ದ ಹುಬ್ಬಳ್ಳಿಯ ಶಾಂತ ವಾತಾವರಣ ಕದಡುವ ಷಡ್ಯಂತ್ರವನ್ನು ಯಾರೂ ಸಹಿಸಬಾರದು. ಸಾಮರಸ್ಯ ಮೂಡಿಸಬೇಕಾದ ಜಾಲತಾಣದಲ್ಲಿ ಒಂದು ಧರ್ಮದ ಯುವಕ ಹಂಚಿಕೊಂಡ ಪ್ರಚೋದನಾತ್ಮಕ ಪೋಸ್ಟ್ ರಾದ್ಧಾಂತಕ್ಕೆ ಕಾರಣ.
ಕಿಡಿಗೇಡಿ, ತಿಳಿಗೇಡಿ ಯುವಕನ ಕೃತ್ಯದಿಂದ ಉದ್ರಿಕ್ತಗೊಂಡ ಇನ್ನೊಂದು ಸಮುದಾಯದ ಕೆಲವರು ರಾತ್ರಿಯೆಲ್ಲ ಹುಬ್ಬಳ್ಳಿಯಲ್ಲಿ ಬೀಭತ್ಸ ಸೃಷ್ಟಿಸಿ ದ್ವೇಷದ ಬೆಂಕಿಗೆ ಪೆಟ್ರೋಲ್ ಸುರಿಯದೇ ಸಹನೆ ಮೆರೆಯಬೇಕಿತ್ತು. ಪೊಲೀಸರ ಮೇಲೆ ದಾಳಿ, ಠಾಣೆ & ಆಸ್ಪತ್ರೆ ಮೇಲೆ ಕಲ್ಲುಗಳನ್ನು ಎಸೆದು ಹಾನಿ ಮಾಡಬಾರದಿತ್ತು ಎಂದು ಹೇಳಿದ್ದಾರೆ.
ಸಹನೆಯಿಂದ ವರ್ತಿಸಿ:
ಕಿಡಿಗೇಡಿ ಯುವಕನ ಬಂಧನವಾಗಿದೆ. ಕಾನೂನು ಅವನನ್ನು ನೋಡಿಕೊಳ್ಳುತ್ತದೆ. ಇನ್ನೊಂದು ಸಮುದಾಯವು ಕಾನೂನನ್ನು ಕೈಗೆತ್ತಿಕೊಳ್ಳದೆ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟು ಸಹನೆಯಿಂದ ವರ್ತಿಸಬೇಕು. ಕಳೆದ ಕೆಲ ದಿನಗಳಿಂದ ಕರ್ನಾಟಕ ಕೋಮುದಳ್ಳುರಿಯಲ್ಲಿ ಬೇಯುತ್ತಿದೆ, ಎಲ್ಲರಿಗೂ ನೋವಾಗುತ್ತಿದೆ. ಅದು ಮುಂದುವರಿಯುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಹುಬ್ಬಳ್ಳಿ ಡಿ.ಜೆ.ಹಳ್ಳಿ ಆಗುವುದು ಬೇಡ:
ಹಿಂದೆ ಬೆಂಗಳೂರಿನಲ್ಲಿ ಕಿಡಿಗೇಡಿ ಯುವಕನೊಬ್ಬ ಒಂದು ಧರ್ಮಗುರುವಿನ ಬಗ್ಗೆ ಪ್ರಚೋದನಾತ್ಮಕ ಪೋಸ್ಟ್ ಹಾಕಿದ್ದ ಪರಿಣಾಮ, ಶಾಸಕರೊಬ್ಬರ ಮನೆ, ಡಿಜೆ ಹಳ್ಳಿ ಪೊಲೀಸ್ ಠಾಣೆಯೇ ಬೆಂಕಿಗೆ ಆಹುತಿಯಾಗಿತ್ತು. ಹುಬ್ಬಳ್ಳಿ ಇನ್ನೊಂದು ಡಿಜೆ ಹಳ್ಳಿ ಆಗುವುದು ಬೇಡ ಎಂದಿದ್ದಾರೆ. ಕುಂದಾಪುರದಿಂದ ಹಿಡಿದು ಹುಬ್ಬಳ್ಳಿವರೆಗೆ ನಡೆದ ಎಲ್ಲ ಘಟನೆಗಳನ್ನು ನೋಡಿದರೆ ಎದ್ದು ಕಾಣುವುದು ರಾಜ್ಯ ಸರಕಾರದ ಘೋರ ವೈಫಲ್ಯ. ಬಿಗಿಕ್ರಮ ಕೈಗೊಳ್ಳುವ ಬದಲಿಗೆ ಸರ್ಕಾರ ಬೀಡುಬೀಸಾಗಿ ವರ್ತಿಸಿದ್ದೇ ಇಂಥ ಘಟನೆಗಳಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಗಂಭೀರವಾಗಿ ಪರಿಗಣಿಸಿ:
ಹುಬ್ಬಳ್ಳಿ ಘಟನೆಯನ್ನು ಮುಖ್ಯಮಂತ್ರಿ & ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಜಾಲತಾಣಗಳ ಮೂಲಕ ಬೆಂಕಿ ಹಾಕಲಾಗುತ್ತಿದೆ. ಕೆಲ ಕಿಡಿಗೇಡಿಗಳಿಗೆ ಕಿಚ್ಚೆಂದರೆ ಬಲು ಇಷ್ಟವೆಂಬಂತೆ ಇದೆ. ಅವರಿಗೆ ಸೋಶಿಯಲ್ ಮೀಡಿಯಾ ಹಿಂಸೆ ಹರಡುವ ಟೂಲ್ ಕಿಟ್ ಆಗಿಬಿಟ್ಟಿದೆ. ಪೊಲೀಸರು, ಮೊದಲು ಅಂಥವರ ಬುಡಕ್ಕೆ ಬೆಂಕಿ ಇಡಬೇಕು ಎಂದು ಹೇಳಿದ್ದಾರೆ.
ಇಂಥ ಘಟನೆ ಬಲು ಇಷ್ಟ:
ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗೆ ಇಂಥ ಕಿಡಿಗೇಡಿ ಘಟನೆಗಳೆಂದರೆ ಬಲು ಇಷ್ಟ. ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕವನ್ನು ಒಡೆದು ಆಳುವ ಮೂಲಕ ಬ್ರಿಟೀಷ್ ನೀತಿಯನ್ನೇ ಇವು ಅನುಸರಿಸುತ್ತಿವೆ. ಈ ಪಕ್ಷಗಳ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರದಿಂದ ಬರ್ಬರವಾದ ಜನರ ಬದುಕಿನ ಬಗ್ಗೆ ಸೋಶಿಯಲ್ ಮೀಡಿಯಾ ಶೂರರ ಮೌನ ಅಪಾಯಕಾರಿ. ಅಲ್ಲದೆ; ರಾಷ್ಟ್ರೀಯ ಪಕ್ಷಗಳ ಕಾಣದ ಕೈಚಳಕ, ಮೌನ ಕುಮ್ಮಕ್ಕು ವಿನಾಶಕಾರಿ ಎಂದು ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ಗಲಭೆ ಪ್ರಕರಣ: ಏ.20ರವರೆಗೆ ನಗರದಾದ್ಯಂತ 144 ಸೆಕ್ಷನ್ ಜಾರಿ, ವಾಣಿಜ್ಯ ನಗರದ ಪರಿಸ್ಥಿತಿ ಉದ್ವಿಗ್ನ
KGF-2 ಕನ್ನಡದ ಹೆಮ್ಮೆಯಲ್ಲ ಎನ್ನುತ್ತಲೇ ದಂಡುಪಾಳ್ಯ ಚಿತ್ರದ ಭಯಾನಕ ಉದಾಹರಣೆ ಕೊಟ್ಟ ಭಾಸ್ಕರ್ ರಾವ್!
ಆಂಜನೇಯನ ಜನ್ಮ ಸ್ಥಳದಲ್ಲಿ ಹಿಂದುಗಳಿಗೆ ಟಿಕೆಟ್ ನೀಡದಿದ್ರೆ ಸೋಲು ಫಿಕ್ಸ್: ಕಾಂಗ್ರೆಸ್ನಲ್ಲೇ ಗೊಂದಲ ಶುರು